ಕೋಝಿಕ್ಕೋಡ್: ರಾಜ್ಯದಲ್ಲಿ ಮತ್ತೆ ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ದೃಢಪಟ್ಟಿದ್ದು, ತಿಕೋಡಿ ಮೂಲದ 14 ವರ್ಷದ ಬಾಲಕ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗುವಿನ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ತಿಂಗಳಲ್ಲಿ ರಾಜ್ಯದಲ್ಲಿ ಅಮೀಬಿಕ್ ಎನ್ಸೆಫಾಲಿಟಿಸ್ ದೃಢಪಟ್ಟ ನಾಲ್ಕನೇ ಪ್ರಕರಣ ಇದಾಗಿದೆ.
ಕೋಝಿಕ್ಕೋಡ್‍ನ ಫಾರೂಕ್ ಕಾಲೇಜಿನ ಮೂಲಿಪರಂಬ್‍ನ 12 ವರ್ಷದ ಬಾಲಕ ಅಮೀಬಿಕ್ ಎನ್ಸೆಫಾಲಿಟಿಸ್‍ನಿಂದ ಈ ಹಿಂದೆ ಸಾವನ್ನಪ್ಪಿದ್ದನು. ಮಲಪ್ಪುರಂ ಮುನ್ನಿಯೂರಿನ ಐದು ವರ್ಷದ ಬಾಲಕಿ ಹಾಗೂ ಕಣ್ಣೂರು ತೊಟ್ಟಡದ ಹದಿಮೂರು ವರ್ಷದ ಬಾಲಕಿ ಇತ್ತೀಚೆಗೆ ಮೃತಪಟ್ಟಿದ್ದರು. ಎರಡು ತಿಂಗಳೊಳಗೆ ರಾಜ್ಯದಲ್ಲಿ ಈ ಮೂರು ಸಾವುಗಳು ಸಂಭವಿಸಿವೆ.
ಅಮೀಬಿಕ್ ಎನ್ಸೆಫಾಲಿಟಿಸ್ ನಿಂದಾಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಅಶುದ್ಧ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಮುಖ್ಯಮಂತ್ರಿ ಸೂಚಿಸಿದರು. ಈಜುಕೊಳಗಳನ್ನು ಕ್ಲೋರಿನೇಟ್ ಮಾಡಬೇಕು. ಮಕ್ಕಳಲ್ಲಿ ಈ ಸೋಂಕು ಕಂಡುಬರುತ್ತಿದೆ. ಆದ್ದರಿಂದ, ಮಕ್ಕಳು ಜಲಮೂಲಗಳಿಗೆ ಪ್ರವೇಶಿಸುವಾಗ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ.