ಜೈಪುರ: ಹನ್ನೊಂದು ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಮ್ಮಳಿಗೆ ₹2 ಲಕ್ಷ ನೀಡಿ ಖರೀದಿಸಿದ್ದ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ರಾಜಸ್ಥಾನ ಪೊಲೀಸರು ಹರಿಯಾಣದಲ್ಲಿ ಬಂಧಿಸಿದ್ದಾರೆ.
ಜೈಪುರ: ಹನ್ನೊಂದು ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಮ್ಮಳಿಗೆ ₹2 ಲಕ್ಷ ನೀಡಿ ಖರೀದಿಸಿದ್ದ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ರಾಜಸ್ಥಾನ ಪೊಲೀಸರು ಹರಿಯಾಣದಲ್ಲಿ ಬಂಧಿಸಿದ್ದಾರೆ.
ಸಂದೀಪ್ ಯಾದವ್ ಹಾಗೂ ಸತ್ವೀರ್ ಯಾದವ್ ಬಂಧಿತ ಆರೋಪಿಗಳು. ಹಣ ಪಡೆದು ಬಾಲಕಿಯನ್ನು ಮಾರಿದ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ರಾಜಸ್ಥಾನದ ದೌಸಾ ಜಿಲ್ಲೆಯ ಮುರಳಿಪುರ ಠಾಣಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
'ಬಾಲಕಿ 11 ವರ್ಷದವಳಿದ್ದಾಗ ಆಕೆಯನ್ನು ಹರಿಯಾಣದ ಕುಟುಂಬವೊಂದಕ್ಕೆ ಮಾರಾಟ ಮಾಡಲಾಗಿತ್ತು. ನಂತರ ಆಕೆ ತನ್ನ 12ನೇ ಹಾಗೂ 14ನೇ ವಯಸ್ಸಿನಲ್ಲಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಕೆಯ ಹೆಸರಿನಲ್ಲಿ ಆಧಾರ್ ಗುರುತಿನ ಚೀಟಿ ಇದ್ದು, ಅದನ್ನು ಆರೋಪಿಗಳು ನಕಲಿ ದಾಖಲೆ ನೀಡಿ ಸೃಷ್ಟಿಸಿದ್ದಾರೆ' ಎಂದು ಅವರು ಮಾಹಿತಿ ನೀಡಿದ್ದಾರೆ.
'ಇವರಿಂದ ತಪ್ಪಿಸಿಕೊಂಡ ಬಾಲಕಿ, ನೇರವಾಗಿ ಮುರಳಿಪುರ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆಕೆಯ ದೂರಿನನ್ವಯ ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ' ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
'ಮಾರಾಟಕ್ಕೂ ಮೊದಲು ಮುರಳಿಪುರದಲ್ಲಿ ಬಾಲಕಿ ತನ್ನ ಪಾಲಕರೊಂದಿಗೆ ವಾಸವಿದ್ದಳು. ಕುಟುಂಬದಲ್ಲಿನ ಭಿನ್ನಾಭಿಪ್ರಾಯದ ನಂತರ ತನ್ನ ಚಿಕ್ಕಮ್ಮ ನೀಮ್ರಾಣಾ ಜತೆ ಜೀವನ ನಡೆಸುತ್ತಿದ್ದಳು. ಬಾಲಕಿಯನ್ನು ಜೋಪಾನವಾಗಿ ನೋಡಿಕೊಳ್ಳುವ ಬದಲು, ಈಕೆ ಹರಿಯಾಣದ ಕುಟುಂಬಕ್ಕೆ ಬಾಲಕಿಯನ್ನು ಮಾರಿದ್ದಳು. ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲು ಜಾಲ ಬೀಸಲಾಗಿದೆ' ಎಂದು ತಿಳಿಸಿದ್ದಾರೆ.