ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪಡೆಯುವುದಕ್ಕೆ ನಡೆಯಲಿರುವ ಎನ್ಇಇಟಿ-ಪಿಜಿ ಪರೀಕ್ಷೆ ಜುಲೈ ತಿಂಗಳಲ್ಲಿ ನಡೆಯಲಿದ್ದು, ಪ್ರಶ್ನೆ ಪತ್ರಿಕೆಗಳು ಸೋರಿಕೆ ತಡೆಗಟ್ಟುವುದಕ್ಕಾಗಿ ಪರೀಕ್ಷೆ ನಡೆಯುವುದಕ್ಕೂ 2 ಗಂಟೆಗಳ ಮುನ್ನ ಪ್ರಶ್ನೆ ಪರೀಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಜೂ.23 ರಂದು ನಡೆಯಬೇಕಿದ್ದ ಎನ್ಇಇಟಿ-ಪಿಜಿ ಪರೀಕ್ಷೆಗಳು ಪರೀಕ್ಷೆಗಳಲ್ಲಿನ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ, ಯುಜಿ ಪರೀಕ್ಷೆಯಲ್ಲಾದ ಅಕ್ರಮಗಳ ವಿವಾದದಿಂದಾಗಿ ಮುಂದೂಡಲ್ಪಟ್ಟಿತ್ತು.
ಸರ್ಕಾರ "ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ NEET-PG ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳುವುದಾಗಿ" ಹೇಳಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಗ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಲಕ್ಷಗಟ್ಟಲೆ ಮಹತ್ವಾಕಾಂಕ್ಷಿ ವೈದ್ಯಕೀಯ ವೃತ್ತಿಪರರು ದಾಖಲಾಗಿದ್ದ ಪರೀಕ್ಷೆ ರದ್ದುಗೊಂಡಿದ್ದು ವಿಶೇಷವಾಗಿ ಪರೀಕ್ಷೆ ಎದುರಿಸಲು ಹಲವು ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿದವರನ್ನು ಕೆರಳಿಸಿ, ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೂರುಗಳ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ನಿಯೋಜಿಸಿದ್ದಾರೆ. NET ಈಗ ಜುಲೈ 25 ರಿಂದ ಜುಲೈ 27 ರವರೆಗೆ ನಡೆಯಲಿದೆ.ಎನ್‌ಟಿಎಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರು, ಕಾರ್ಯಕರ್ತರು ಮತ್ತು ಪ್ರತಿಪಕ್ಷಗಳು ಟೀಕಿಸಿದ್ದಾರೆ.