ಕೊಚ್ಚಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಅದಕ್ಕೆ ಬೇಕಾಗಿರುವುದು ಕಾಯುವ ತಾಳ್ಮೆ. ನಮ್ಮ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡಬೇಕು. ದೇವರ ಮೇಲೆ ಭಾರ ಹಾಕಿ ಜೀವನದಲ್ಲಿ ಮುನ್ನಡೆಯಬೇಕು. ಒಂದಲ್ಲ ಒಂದು ದಿನ ಅದೃಷ್ಟ ಕೂಡಿ ಬರುತ್ತದೆ.
ರಾತ್ರೋರಾತ್ರಿ ಮಿಲಿಯನೇರ್ ಆಗುವ ಜನರ ಬಗ್ಗೆ ನಾವು ಆಗಾಗ ಸುದ್ದಿಗಳನ್ನು ಓದಿರುತ್ತೇವೆ. ಇವರೆಲ್ಲರ ಅದೃಷ್ಟಕ್ಕೆ ಲಾಟರಿಯೇ ಕಾರಣ. ಹೌದು, ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದವರಿಗೂ ಲಾಟರಿ ಹೊಡೆದು ರಾತ್ರೋರಾತ್ರಿ ಲಕ್ಷಾಧಿಪತಿಗಳಾದವರು ಬಹಳ ಮಂದಿ ಇದ್ದಾರೆ. ಇದೀಗ ಈ ಪಟ್ಟಿಗೆ ಪೂಜಾರಿಯೊಬ್ಬರು ಸೇರಿಕೊಂಡಿದ್ದಾರೆ. 20 ವರ್ಷಗಳಿಂದ ದೇವರ ಸೇವೆಯಲ್ಲಿದ್ದ ಪೂಜಾರಿಗೆ ಕೊನೆಗೂ ದೇವರು ಭಾಗ್ಯವನ್ನು ಕರುಣಿಸಿದ್ದಾನೆ. ಪೂಜಾರಿ ಲಾಟರಿಯಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ.
ಈ ಘಟನೆ ನಡೆದಿರುವುದು ಕೇರಳದಲ್ಲಿ. ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ ಮೂಲದ ಮಧುಸೂದನ್ ಎಂಬ ವ್ಯಕ್ತಿ ಕಳೆದ 20 ವರ್ಷಗಳಿಂದ ಸ್ಥಳೀಯ ಮೆಪ್ಪಾರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ 50 50 ಲಾಟರಿಯಲ್ಲಿ ಒಂದು ಕೋಟಿ ರೂ. ಬಹುಮಾನ ಅವರ ಟಿಕೆಟ್ ಸಂಖ್ಯೆ FT506060 ಒಲಿದು ಬಂದಿದೆ. ರಾಧಾಕೃಷ್ಣನಾಯರ್ ಅವರ ಸಬರಿಗಿರಿ ಲಕ್ಕಿ ಸೆಂಟರ್ನಲ್ಲಿ ಮಧುಸೂದನ್ ಅವರು ಈ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿದ್ದರು. ಇದೀಗ ಆ ಲಾಟರಿ ಮಧುಸೂದನ್ ಅವರ ಬಾಳನ್ನೇ ಬದಲಾಯಿಸಿದೆ.
ಅಂದಹಾಗೆ ಮಧುಸೂದನ್ ಅವರು ಆಗಾಗ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಈ ಬಾರಿ ಅವರು ಅದೃಷ್ಟವಂತರಾಗಿದ್ದಾರೆ. ಈ ಹಿಂದೆಯೂ ಒಮ್ಮೆ ಅತಿ ಕಡಿಮೆ ಮೊತ್ತವನ್ನು ಗೆದ್ದಿದ್ದರು. ಇನ್ನೊಂದು ಬಾರಿ ಒಂದೇ ಸಂಖ್ಯೆಯಿಂದ 70 ಲಕ್ಷ ಗೆಲ್ಲುವ ಅವಕಾಶ ಕಳೆದುಕೊಂಡರು. ಆದರೆ, ಪಟ್ಟುಬಿಡದೆ ಪ್ರಯತ್ನಪಟ್ಟು ಈ ಬಾರಿ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ.
ಮಧುಸೂದನ್ ಕುಟುಂಬದ ವಿಚಾರಕ್ಕೆ ಬಂದರೆ ಅವರಿಗೆ ಪತ್ನಿ ಅಧೀರಾ, ಇಬ್ಬರು ಮಕ್ಕಳಾದ ವೈಷ್ಣವ್ ಮತ್ತು ವೈಗಾಲಕ್ಷ್ಮಿ ಇದ್ದಾರೆ. ಮಧುಸೂದನ್ ಅವರಿಗೆ ಲಾಟರಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಬಂದಿದ್ದರಿಂದ ಭಕ್ತರು ಶುಭ ಹಾರೈಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ದೈವಿಕ ಸೇವೆ ಮಾಡಿದ್ದಕ್ಕಾಗಿ ಭಗವಂತ ಅವರನ್ನು ಆಶೀರ್ವದಿಸಿದ್ದಾನೆ ಎಂದು ಹೇಳಲಾಗುತ್ತಿದೆ.