ನವದೆಹಲಿ: 2024 ರ ಹಜ್ ಯಾತ್ರೆಯ ಸಮಯದಲ್ಲಿ 200ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಾವುಗಳು ಹೃದಯಾಘಾತ-ಉಸಿರಾಟ ಮತ್ತು ಹೃದಯ-ಶ್ವಾಸಕೋಶದ ಸ್ತಂಭನಕ್ಕೆ ಕಾರಣವಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಹಜ್ ಯಾತ್ರೆಯ ಯಶಸ್ವಿ ನಿರ್ವಹಣೆಗೆ ಮತ್ತು ಭಾರತೀಯ ಯಾತ್ರಾರ್ಥಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಗಮನಾರ್ಹ ಒತ್ತು ನೀಡಿದೆ ಎಂದು ಹೇಳಿದರು.
"ಜುಲೈ 21ರ ವರೆಗೆ 201 ಭಾರತೀಯ ಯಾತ್ರಾರ್ಥಿಗಳು 2024 ರ ಹಜ್ ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹೃದಯಾಘಾತ-ಉಸಿರಾಟದ ಸಮಸ್ಯೆ ಮತ್ತು ಹೃದಯ-ಶ್ವಾಸಕೋಶದ ಸ್ತಂಭನದಿಂದ ಮೃತಪಟ್ಟಿದ್ದಾರೆ" ಎಂದು ಅವರು ಹೇಳಿದರು.
ಒಟ್ಟು ಸಾವುನೋವುಗಳಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾತ್ರಾರ್ಥಿಗಳಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ ಎಂದು ರಿಜಿಜು ತಿಳಿಸಿದ್ದಾರೆ.
"ಹಜ್ ಯಾತ್ರೆಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಪ್ರಗತಿಪರ ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಇದು ಹಜ್ ಯಾತ್ರೆಯ ಅನುಭವದಲ್ಲಿ ಗುಣಾತ್ಮಕ ಸುಧಾರಣೆಗೆ ಕಾರಣವಾಗಿದೆ" ಎಂದು ಅವರು ಹೇಳಿದರು.