ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಅನ್ನು ಇಂದು (ಜುಲೈ 23) ಮಂಡಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯದಲ್ಲಿ ಯುವಕರು, ಮಹಿಳೆಯರು, ರೈತರು ಹಾಗೂ ಮಧ್ಯಮ ವರ್ಗಕ್ಕೆ ಹೆಚ್ಚಿನ ಹೊತ್ತು ನೀಡಲಾಗಿದೆ.
ಬಜೆಟ್ನಲ್ಲಿ ಕೆಲವು ಸುಂಕಗಳು ಮತ್ತು ತೆರಿಗೆಗಳಲ್ಲಿ ಬದಲಾವಣೆ ಮಾಡಿರುವುದರಿಂದ ಕೆಲವು ವಸ್ತುಗಳು ಅಗ್ಗವಾಗುತ್ತವೆ ಮತ್ತು ಕೆಲವು ದುಬಾರಿಯಾಗುತ್ತವೆ. ಹೀಗಾಗಿ ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ.
ಯಾವುದು ಅಗ್ಗ?
* ಮೊಬೈಲ್ ಫೋನ್, ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಶೇ. 15 ಕ್ಕೆ ಇಳಿಕೆಯಾಗಿರುವುದರಿಂದ ಮೊಬೈಲ್ ಫೋನ್, ಚಾರ್ಜರ್ ಮತ್ತು ಬಿಡಿಭಾಗಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
* ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 6ಕ್ಕೆ ಮತ್ತು ಪ್ಲಾಟಿನಂ ಅನ್ನು ಶೇ. 6.4 ಕ್ಕೆ ಇಳಿಸುವುದರಿಂದ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳ ಬೆಲೆ ಅಗ್ಗವಾಗಲಿದೆ.
* ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
* ವಿದ್ಯುತ್ ಉಪಕರಣಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
* ಸೌರ ಫಲಕಗಳ ತಯಾರಿಕೆಯಲ್ಲಿ ಬಳಸಲಾಗುವ ವಿನಾಯಿತಿ ಪಡೆದ ಕ್ಯಾಪಿಟಲ್ ಗೂಡ್ಸ್ ಪಟ್ಟಿಯನ್ನು ವಿಸ್ತರಿಸುವುದಾಗಿ ವಿತ್ತಸಚಿವೆ ಘೋಷಣೆ ಮಾಡಿದ್ದಾರೆ.
* ಇ-ಕಾಮರ್ಸ್ ಮೇಲಿನ ಟಿಡಿಎಸ್ ದರವನ್ನು ಶೇ. 1 ರಿಂದ ಶೇ. 0.1 ಕ್ಕೆ ಇಳಿಸಲಾಗಿದೆ.
* ಫೆರೋನಿಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ.
* ಕೆಲ ಪಾಲಿಚೈಟ್ ಹುಳುಗಳು, ಸೀಗಡಿ ಮತ್ತು ಮೀನಿನ ಆಹಾರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 5 ಕ್ಕೆ ಇಳಿಸಲಾಗಿದೆ.
* ಸೀಗಡಿ ಮತ್ತು ಮೀನಿನ ಆಹಾರ ತಯಾರಿಕೆಗೆ ವಿವಿಧ ಇನ್‌ಪುಟ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ವಿನಾಯಿತಿ ನೀಡಲಾಗಿದೆ.
* ಪ್ರತಿರೋಧಕಗಳ ತಯಾರಿಕೆಗಾಗಿ ಆಮ್ಲಜನಕ ಮುಕ್ತ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ.
ಯಾವುದು ತುಟ್ಟಿ?
* ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 10 ರಷ್ಟು ಮತ್ತು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳ ಮೇಲೆ ಶೇ. 25ಕ್ಕೆ ಹೆಚ್ಚಿಸಲಾಗಿದೆ.
* ಮೊಬೈಲ್ ಟವರ್ ಮತ್ತು ಬ್ರ್ಯಾಂಡೆಡ್ ಬಟ್ಟೆಗಳ ದರದಲ್ಲಿ ಹೆಚ್ಚಳವಾಗಿದೆ.
* ನಿಗದಿತ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು 10% ರಿಂದ 15% ಕ್ಕೆ ಸರ್ಕಾರ ಹೆಚ್ಚಿಸಿದೆ.
* 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಅಧಿಸೂಚಿತ ಸರಕುಗಳ ಮೇಲೆ ಶೇ. 1 ರಷ್ಟು ಟಿಸಿಎಸ್ ವಿಧಿಸಲು ಸರ್ಕಾರ ಪ್ರಸ್ತಾಪಿಸಿದೆ.
ಇದೇ ವೇಳೆ ಆದಾಯ ತೆರಿಗೆಯನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ವೈಯಕ್ತಿಕ ಆದಾಯ ತೆರಿಗೆ ದರಗಳಿಗೆ ಬರುವುದಾದರೆ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ನಾನು ಎರಡು ಪ್ರಮುಖ ಘೋಷಣೆಗಳನ್ನು ಮಾಡುತ್ತೇನೆ. ಮೊದಲನೆಯದಾಗಿ, ಸಂಬಳದ ಉದ್ಯೋಗಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 15,000 ರೂ.ಗಳಿಂದ 25,000 ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಇದು ಸುಮಾರು 4 ಕೋಟಿ ವೇತನದಾರರು ಮತ್ತು ಪಿಂಚಣಿದಾರರಿಗೆ ಪರಿಹಾರವನ್ನು ನೀಡುತ್ತದೆ ಎಂದು ವಿತ್ತಸಚಿವೆ ಹೇಳಿದರು.