ತಿರುವನಂತಪುರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು, ಮಳೆಗಾಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವ ಪಿ.ಎ. ಮುಹಮ್ಮದ್ ರಿಯಾಝ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ಸೇರಿ ವಿವಿಧ ಶಾಸಕರುಗಳು ವಿಧಾನಸಭೆಯಲ್ಲಿ ಮಂಡಿಸಿದ ಸಮಸ್ಯೆಗಳು ಹಾಗೂ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 66 ತಿರುವನಂತಪುರದಿಂದ ಕಾಸರಗೋಡಿನ ವರೆಗಿನ 9 ಜಿಲ್ಲೆಗಳ ಮೂಲಕ ಹಾದುಹೋಗುವ 17 ರೀಚ್‍ಗಳಲ್ಲಿ ನಿರ್ಮಾಣವಾಗುತ್ತಿದೆ. 45 ಮೀಟರ್ ಆರು ಪಥದ ರಸ್ತೆಯನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟಾಗಿ ಮುನ್ನಡೆಯುತ್ತಿವೆ. ಪೂರ್ಣಗೊಂಡ ಪ್ರತಿಯೊಂದು ರೀಚ್‍ಗಳನ್ನು ಏಕಕಾಲದಲ್ಲಿ ತೆರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ರಾಜ್ಯದ ಸಾರಿಗೆ ವಲಯದಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ಬಿ.ಎಲ್. ಮೀನಾ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ. ಬಿಜು ಸಭೆಯಲ್ಲಿ ಭಾಗವಹಿಸಿದ್ದರು.