ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ನಡೆದ ಕೆಲವು ದಿನಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ವೋಯ್ನರ್ ಸುಸ್ಥಿರ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಭಾರತ ಆದ್ಯತೆ ನೀಡುತ್ತಿರುವ ಪ್ರಮುಖ ಜನಸಂಖ್ಯಾ ಪ್ರವೃತ್ತಿಗಳನ್ನು ವಿವರಿಸಿದರು.
ಈ ಪ್ರವೃತ್ತಿಗಳಲ್ಲಿ ಯುವ ಜನಸಂಖ್ಯೆ, ವಯಸ್ಸಾಗುತ್ತಿರುವವರ ಜನಸಂಖ್ಯೆ, ನಗರೀಕರಣ, ವಲಸೆ ಹಾಗೂ ಹವಾಮಾನ ಪರಿಸ್ಥಿತಿ ಕೂಡ ಸೇರಿವೆ. ಪ್ರತಿಯೊಂದು ಪ್ರವೃತ್ತಿಯೂ ದೇಶಕ್ಕೆ ವಿಶಿಷ್ಟ ಸವಾಲುಗಳು ಹಾಗೂ ಅವಕಾಶಗಳನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
2050ರ ವೇಳೆಗೆ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಸಂಖ್ಯೆ 34.6 ಕೋಟಿಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಆದುದರಿಂದ ಆರೋಗ್ಯ, ವಸತಿ ಹಾಗೂ ಪಿಂಚಣಿ ಯೋಜನೆಗಳಿಗೆ ಹೆಚ್ಚಿನ ಹೂಡಿಕೆಯ ಅಗತ್ಯತೆ ಇದೆ. ವಿಶೇಷವಾಗಿ ಒಂಟಿಯಾಗಿ ಬದುಕುವ ಸಾಧ್ಯತೆ ಇರುವ ಹಾಗೂ ಬಡತನ ಎದುರಿಸುವ ಹೆಚ್ಚು ವಯಸ್ಸಿನ ಮಹಿಳೆಯರಿಗೆ ಇದು ಅತ್ಯಗತ್ಯ ಎಂದಿದ್ದಾರೆ.
ಪ್ರಸಕ್ತ ಭಾರತವು 10ರಿಂದ 19 ವರ್ಷದೊಳಗಿನ 25.2 ಕೋಟಿಯಷ್ಟು ಗಣನೀಯ ಪ್ರಮಾಣದ ಯುವ ಜನಸಂಖ್ಯೆಯನ್ನು ಹೊಂದಿದೆ ಎಂದು ಅವರು ನುಡಿದರು.
ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಹೂಡಿಕೆ ಮಾಡುವುದು, ಲಿಂಗ ಸಮಾನತೆಯನ್ನು ಉತ್ತೇಜಿಸುವುದರ ಜೊತೆಗೆ ಜನಸಂಖ್ಯೆಯ ಸಾಮರ್ಥ್ಯದ ಪ್ರಯೋಜನ ಪಡೆದುಕೊಳ್ಳಬಹುದು, ರಾಷ್ಟ್ರವನ್ನು ಸುಸ್ಥಿರ ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಅವರು ಹೇಳಿದ್ದಾರೆ.
2050ರ ವೇಳೆಗೆ ಭಾರತ ಶೇ. 50ರಷ್ಟು ನಗರಗಳ ರಾಷ್ಟ್ರವಾಗಲಿದೆ ಎಂದು ಅಂದಾಜಿಸಲಾಗಿದೆ. ಕೊಳಗೇರಿ ಬೆಳವಣಿಗೆ, ವಾಯು ಮಾಲಿನ್ಯ ಹಾಗೂ ಪರಿಸರ ಸಮಸ್ಯೆಗಳನ್ನು ನಿರ್ವಹಿಸಲು ಸ್ಮಾರ್ಟ್ ಸಿಟಿಗಳು, ಬಲವಾದ ಮೂಲಭೂತ ಸೌಕರ್ಯ ಹಾಗೂ ಕೈಗೆಟಕುವ ಬೆಲೆಯಲ್ಲಿ ವಸತಿಗಳನ್ನು ನಿರ್ಮಿಸುವುದು ನಿರ್ಣಾಯಕವಾಗಿದೆ ಎಂದು ವೋಯ್ನರ್ ತಿಳಿಸಿದರು.
ಲಿಂಗ ಸಮಾನತೆಯನ್ನು ಉತ್ತೇಜಿಸಲು ಹಾಗೂ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸಲು ನಗರ ಅಭಿವೃದ್ಧಿ ಯೋಜನೆಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡಬೇಕು, ಆರೋಗ್ಯ ಸೇವೆ, ಶಿಕ್ಷಣದ ಸೌಲಭ್ಯಗಳನ್ನು ವಿಸ್ತರಿಸಬೇಕು ಮತ್ತು ಉದ್ಯೋಗವಕಾಶಗಳನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಆಂತರಿಕ ಹಾಗೂ ಬಾಹ್ಯಾ ವಲಸೆಯನ್ನು ನಿರ್ವಹಿಸಲು ನಿಖರವಾದ ಯೋಜನೆ, ಕೌಶಲ ಅಭಿವೃದ್ಧಿ ಹಾಗೂ ಆರ್ಥಿಕ ಅವಕಾಶಗಳ ವಿತರಣೆಯ ಅಗತ್ಯವಿದೆ ಎಂದು ವೋಯ್ನರ್ ಗಮನ ಸೆಳೆದರು.