ವಿಶ್ವಸಂಸ್ಥೆ: 2060ರ ದಶಕದ ಆರಂಭದಲ್ಲಿ ಭಾರತದ ಜನಸಂಖ್ಯೆ ಸುಮಾರು 1.7 ಶತಕೋಟಿಗೆ ತಲುಪಲಿದ್ದು, ಬಳಿಕ ಅದು ಶೇ 12 ರಷ್ಟು ಕುಸಿಯುವ ನಿರೀಕ್ಷೆಯಿದೆ. ಆದರೆ ಶತಮಾನದುದ್ದಕ್ಕೂ ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿ ಇರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.
ಗುರುವಾರ ಬಿಡುಗಡೆಯಾದ 'ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2024' ವರದಿಯ ಪ್ರಕಾರ, ಮುಂಬರುವ 50-60 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆಯಲ್ಲಿ ಬೆಳವಣಿಗೆಯಾಗಲಿದೆ. 2080ರ ಮಧ್ಯದಲ್ಲಿ ವಿಶ್ವದ ಜನಸಂಖ್ಯೆ ಸುಮಾರು 10.3 ಶತಕೋಟಿಗೆ ತಲುಪುತ್ತದೆ. ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತವು 2100ರ ವರೆಗೂ ಇದೇ ಸ್ಥಾನದಲ್ಲಿ ಮುಂದುವರಿಯಲಿದೆ ಎಂದು ಅಂದಾಜಿಸಿದೆ.
ವರದಿಯ ಪ್ರಕಾರ, 2024 ರಲ್ಲಿ ಭಾರತದ ಜನಸಂಖ್ಯೆಯು 1.45 ಶತಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಇದು 2054 ರಲ್ಲಿ 1.69 ಶತಕೋಟಿಗೆ ಏರುತ್ತದೆ. 2100 ರಲ್ಲಿ ಶತಮಾನದ ಅಂತ್ಯದ ವೇಳೆಗೆ, ಭಾರತದ ಜನಸಂಖ್ಯೆಯು 1.5 ಶತಕೋಟಿಗೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ.