ಪುಣೆ: ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂದೂಕು ತೋರಿಸಿ ಕೆಲವರಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಬಂಧಿರಾಗಿರುವ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಜುಲೈ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪುಣೆ: ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂದೂಕು ತೋರಿಸಿ ಕೆಲವರಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಬಂಧಿರಾಗಿರುವ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಜುಲೈ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ರಾಯಗಢ ಜಿಲ್ಲೆಯ ಮಹಾಡ್‌ನಲ್ಲಿರುವ ಲಾಡ್ಜ್‌ನಲ್ಲಿ ಮನೋರಮಾ ಅವರು ತಲೆಮರೆಸಿಕೊಂಡಿದ್ದರು. ಅವರನ್ನು ಪತ್ತೆ ಮಾಡಿದ ಪೊಲೀಸರು ಇಂದು (ಗುರುವಾರ) ವಶಕ್ಕೆ ಪಡೆದು ಪೌದ್ ಪೊಲೀಸ್ ಠಾಣೆಗೆ ಕರೆತಂದು ಬಂಧನದಲ್ಲಿ ಇರಿಸಿದ್ದರು. ಬಳಿಕ ಅವರನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಿದಾಗ ಜುಲೈ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪುಣೆಯ ಮುಲ್ಶಿ ತೆಹಸಿಲ್‌ನ ಗಢವಾಲಿ ಗ್ರಾಮದಲ್ಲಿ ಭೂವಿವಾದಕ್ಕೆ ಸಂಬಂಧಿಸಿದಂತೆ ಮನೋರಮಾ ಮತ್ತು ಆಕೆಯ ಪತಿ ದಿಲೀಪ್ ಖೇಡ್ಕರ್ ಅವರು ಕೆಲವು ವ್ಯಕ್ತಿಗಳಿಗೆ ಬಂದೂಕು ತೋರಿಸಿ ಬೆದರಿಕೆ ಹಾಕುತ್ತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು.
ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿರುವ ಪೊಲೀಸರು, ಮನೋರಮಾ ಪತ್ತೆಗಾಗಿ ವ್ಯಾಪಕ ಹುಡುಕಾಟ ನಡೆಸಿದ್ದರು.
ಪೂಜಾ ತಂದೆ ವಿರುದ್ಧ ದೂರು
ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ ದಿಲೀಪ್ ಖೇಡ್ಕರ್ ಅವರ ಆಸ್ತಿಯು ಘೋಷಿತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಆರೋಪ ಕುರಿತು ತನಿಖೆ ಆಗಬೇಕು ಎಂದು ಪುಣೆ ಎಸಿಬಿಗೆ ದೂರು ಸಲ್ಲಿಕೆಯಾಗಿದೆ. ದಿಲೀಪ್ ಅವರ ವಿರುದ್ಧ ಇದೇ ಬಗೆಯ ಆರೋಪ ಕುರಿತಾಗಿ ಎಸಿಬಿಯ ನಾಸಿಕ್ ವಿಭಾಗವು ಈಗಾಗಲೇ ವಿಚಾರಣೆ ನಡೆಸುತ್ತಿರುವ ಕಾರಣ ತಾನು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡುವಂತೆ ಪುಣೆ ಘಟಕವು ಮುಖ್ಯ ಕಚೇರಿಯನ್ನು ಕೋರಿದೆ. 'ನಾವು ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಸಾಕ್ಷ್ಯಗಳ ಜೊತೆಗೆ ಅದನ್ನು ಎಸಿಬಿ ಮುಖ್ಯ ಕಚೇರಿಗೆ ರವಾನಿಸಿದ್ದೇವೆ' ಎಂದು ಪುಣೆ ಎಸಿಬಿ ಎಸ್‌ಪಿ ಅಮೋಲ್ ತಂಬೆ ತಿಳಿಸಿದ್ದಾರೆ.