HEALTH TIPS

ಭಾರತ- ರಷ್ಯಾ 22ನೇ ಶೃಂಗಸಭೆ: ರಷ್ಯಾಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

           ಮಾಸ್ಕೋ: ಉಕ್ರೇನ್‌ ಮೇಲೆ ರಷ್ಯಾ ಸೇನಾ ಆಕ್ರಮಣದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ರಷ್ಯಾ ರಾಜಧಾನಿ ಮಾಸ್ಕೋಗೆ ಬಂದಿಳಿದರು. ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ಜೊತೆಗೆ ಇಂಧನ, ವ್ಯಾಪಾರ, ರಕ್ಷಣಾ ಕ್ಷೇತ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ‌ ಕುರಿತು ಮಾತುಕತೆ ನಡೆಸಲಿದ್ದಾರೆ.

           ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಸೇನಾಪಡೆಯಿಂದ ಗೌರವವಂದನೆ ಸಲ್ಲಿಸಲಾಯಿತು. ನಂತರ ಅವರನ್ನು ರಷ್ಯಾದ ಚೊಚ್ಚಲ ಉಪಪ್ರಧಾನಿ ಡೆನಿಸ್‌ ಮಂಟ್ರೊವ್‌ ಅವರು ಬರಮಾಡಿಕೊಂಡರು. ನಂತರ, ಇಬ್ಬರೂ ಒಂದೇ ಕಾರಿನಲ್ಲಿ ಪ್ರಧಾನಿ ಮೋದಿ ಅವರು ತಂಗಿದ್ದ ಹೋಟೆಲ್‌ನತ್ತ ತೆರಳಿದರು. ಅಲ್ಲಿಗೆ ಬಂದಿಳಿದ ಇಬ್ಬರನ್ನೂ, ರಷ್ಯಾದ ಕಲಾವಿದರು ಹಿಂದಿ ಹಾಡುಗಳಿಗೆ ನೃತ್ಯ ಮಾಡಿ, ಸ್ವಾಗತಿಸಿದರು.


            2019ರ ಬಳಿಕ ಮೋದಿ ಅವರು ರಷ್ಯಾಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ಸೋಮವಾರ ರಾತ್ರಿ ಪ್ರಧಾನಿ ಮೋದಿ ಅವರಿಗಾಗಿಯೇ ಪುಟಿನ್‌ ಖಾಸಗಿ ಔತಣಕೂಟ ಏರ್ಪಡಿಸಿದ್ದರು.

ಮಂಗಳವಾರ ಮಾಸ್ಕೋದಲ್ಲಿ 22ನೇ ಭಾರತ-ರಷ್ಯಾ ಶೃಂಗಸಭೆ ನಡೆಯಲಿದೆ.

            'ಎರಡೂ ದೇಶಗಳ ನಡುವಿನ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ಸಮುದಾಯದವರ ಜೊತೆಗೂ ಸಂವಾದ ನಡೆಸಲಿದ್ದಾರೆ' ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣ್‌ಧೀರ್ ಜೈಸ್ವಾಲ್‌ 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ‌.

'ಶಾಂತಿಯುತ ಹಾಗೂ ಪ್ರದೇಶವಾರು ಸ್ಥಿರತೆಯ ವಿಷಯದಲ್ಲಿ ಭಾರತವು ಪ್ರಮುಖ ಪಾತ್ರ ‌ವಹಿಸಲು ಬಯಸುತ್ತದೆ‌' ಎಂದು ದೆಹಲಿಯಲ್ಲಿ ವಿಮಾನ ಏರುವ ಮುನ್ನ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.

ಶೃಂಗಸಭೆಯ ಬಳಿಕ ಜುಲೈ 9ರಂದು ಮೋದಿ ಅವರು ಆಸ್ಟ್ರಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 40 ವರ್ಷದ ಬಳಿಕ ಭಾರತದ ಪ್ರಧಾನಿಯೊಬದ್ಬರು ಈ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಟಿ.ವಿ ಟವರ್‌ನಲ್ಲಿ ಹಾರಿದ ರಾಷ್ಟ್ರಧ್ವಜ: ಮೋದಿ ಅವರು ಮಾಸ್ಕೋಗೆ ಬಂದಿಳಿಯುತ್ತಿದ್ದಂತೆಯೇ ಅತ್ಯಂತ ಪ್ರಸಿದ್ಧ 'ಒಸ್ಟಾನಿಕೊನೊ ಟಿವಿ ಟವರ್‌' ನಲ್ಲಿ ಭಾರತ- ರಷ್ಯಾ ರಾಷ್ಟ್ರಧ್ವಜಗಳು ಹಾರಲು ಆರಂಭಿಸಿದವು.

              ಯುರೋಪ್‌ನ ಅತಿ ಎತ್ತರದ ‌ಹಾಗೂ ವಿಶ್ವದ ನಾಲ್ಕನೇ ಅತಿ ಎತ್ತರದ ಟವರ್‌(1,771 ಅಡಿ) ಇದಾಗಿದ್ದು, 1967ರಲ್ಲಿ ಸೋವಿಯತ್‌ನ ಖ್ಯಾತ ಎಂಜಿನಿಯರ್‌ ನಿಕೊಲಾಯಿ ನಿಕಿಟಿನ್‌ ಅದನ್ನು ಸ್ಥಾಪಿಸಿದರು. ಇದು ಮಾಸ್ಕೋದ ಹೆಗ್ಗುರುತಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ.

          ಮೋದಿ ಬೆಂಬಲದ ನಿರೀಕ್ಷೆಯಲ್ಲಿ ಭಾರತೀಯ ಸಂಜಾತರು

ಮಾಸ್ಕೊ: ಪ್ರಧಾನಿ ನರೇಂದ್ರ ಮೋದಿಯವರ ಮಾಸ್ಕೊ ಭೇಟಿಯನ್ನು ರಷ್ಯಾದಲ್ಲಿರುವ ಭಾರತೀಯ ಸಮುದಾಯವು ಕುತೂಹಲದಿಂದ ಎದುರು ನೋಡುತ್ತಿದ್ದು ಹಿಂದೂ ದೇಗುಲ ನಿರ್ಮಾಣ ಭಾರತೀಯ ಶಾಲೆ ಆರಂಭ ಸೇರಿದಂತೆ ಭಾರತಕ್ಕೆ ನೇರ ವಿಮಾನಯಾನದ ಸಂಪರ್ಕ ಜಾಲವನ್ನು ಹೆಚ್ಚಿಸಲು ಬೆಂಬಲ ಕೋರಲಿದೆ. ಮಂಗಳವಾರ ನಡೆಯಲಿರುವ ಭಾರತ-ರಷ್ಯಾ 22ನೇ ವಾರ್ಷಿಕ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಆಹ್ವಾನದ ಮೇರೆಗೆ ಮೋದಿಯವರು ರಷ್ಯಾ ಪ್ರವಾಸ ಕೈಗೊಂಡಿದ್ದು ಜುಲೈ 8 9ರಂದು ಮಾಸ್ಕೊದಲ್ಲಿ ಇರಲಿದ್ದಾರೆ.

                ರಷ್ಯಾದಲ್ಲಿರುವ ಭಾರತೀಯ ಸಂಜಾತರು ಮೋದಿ ಅವರ ಮಾಸ್ಕೊ ಭೇಟಿಯ ಬಗ್ಗೆ ಉತ್ಸಾಹದಿಂದಿದ್ದು ಪಿಟಿಐನ ವಿಡಿಯೊ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

'ಭಾರತೀಯ ಸಮುದಾಯಕ್ಕೆ ಕೆಲವೊಂದು ಕೊರತೆ ಕಾಡುತ್ತಿದೆ. ರಷ್ಯಾದಲ್ಲಿ ಹಿಂದೂ ದೇಗುಲ ನಿರ್ಮಾಣಗೊಳ್ಳಬೇಕಿದೆ. ಈ ಬೇಡಿಕೆಯನ್ನು ನಾವು ಭಾರತದ ಪ್ರಧಾನಿ ಮೂಲಕ ಸಲ್ಲಿಸುತ್ತೇವೆ. ಏರೋಫ್ಲಾಟ್‌ ಏರ್‌ಲೈನ್ಸ್‌ ಮಾತ್ರ ನೇರ ಸಂಪರ್ಕದ ವಿಮಾನಯಾನ ಸೇವೆ ಹೊಂದಿದೆ. ಇದರಲ್ಲಿ ಕೆಲವು ತೊಂದರೆಗಳಿವೆ. ಆದ್ದರಿಂದ ಏರ್‌ ಇಂಡಿಯಾ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳು ರಷ್ಯಾಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಿದರೆ ಅನುಕೂಲಕಾರಿಯಾಗಲಿದೆ' ಎಂದು ರಷ್ಯಾದಲ್ಲಿ ವಾಸಿಸುತ್ತಿರುವ ಪಟ್ನಾದ ರಾಕೇಶ್‌ ಕುಮಾರ್ ಶ್ರೀವಾಸ್ತವ ತಿಳಿಸಿದರು.

               ರಷ್ಯಾದಲ್ಲಿ ಈಚೆಗಿನ ವರ್ಷಗಳಲ್ಲಿ ಹಿಂದೂ ಧರ್ಮ ಪಸರಿಸುತ್ತಿದೆ. ಭಾರತೀಯರ ಸಂಖ್ಯೆಯೂ ಹೆಚ್ಚುತ್ತಿದೆ. ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ಸಮುದಾಯಕ್ಕೆ ಹಿಂದೂ ದೇಗುಲದ ಅವಶ್ಯಕತೆಯಿದೆ ಎಂದಿದ್ದಾರೆ. 'ಮೋದಿಯವರು ಭಾರತೀಯ ಸಂಜಾತರ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ. ಅವರು ಮುತುವರ್ಜಿ ವಹಿಸಿದರೆ ಮಾತ್ರ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ. ಕೆಲವೊಂದು ಸರಕುಗಳನ್ನು ಆಮದು ಮಾಡಿಕೊಳ್ಳುವಾಗ ಅನುಭವಿಸುತ್ತಿರುವ ತೊಂದರೆ ನಿವಾರಣೆಯಾಗಲಿವೆ. ಇದರಿಂದ ಭಾರತ-ರಷ್ಯಾ ನಡುವಿನ ಸಂಬಂಧವು ಮತ್ತಷ್ಟು ಸದೃಢಗೊಳ್ಳಲಿದೆ' ಎಂದು ಮತ್ತೊಬ್ಬ ಭಾರತೀಯ ದಿಲೀಪ್ ಕುಮಾರ್ ಮಿಂಗ್ಲಾನಿ ಹೇಳಿದರು.

              'ಭಾರತೀಯ ಶಾಲೆಯ ಹಾಲಿ ಕಟ್ಟಡ ಸಾಕಷ್ಟು ಹಳೆಯದಾಗಿದೆ. ಹೊಸ ಕಟ್ಟಡ ನಿರ್ಮಾಣಗೊಂಡರೆ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲವಾಗಿರುತ್ತದೆ. ಆದ್ದರಿಂದ ಹೊಸ ಕಟ್ಟಡದ ನಿರ್ಮಾಣವನ್ನು ನಾನು ಬಯಸುತ್ತೇನೆ. ಏಕೆಂದರೆ ನಾನೊಬ್ಬ ತಾಯಿ' ಎಂದು ಉತ್ತರ ಪ್ರದೇಶ ಮೂಲದ ರಷ್ಯಾ ನಿವಾಸಿ ಪೊಜ್ಜಾ ಚಂದ್ರ ಹೇಳಿದರು.

                 'ರಷ್ಯಾದಲ್ಲಿ ಆಯುರ್ವೇದವನ್ನು ಅನುಮೋದಿತ ಔಷಧೀಯ ವ್ಯವಸ್ಥೆಯಾಗಿ ಗುರುತಿಸಿಲ್ಲ. ಆದ್ದರಿಂದ ಆಯುರ್ವೇದ ಔಷಧಿಗಳಿಗೆ ಮಾನ್ಯತೆ ಕೊಡಿಸಲು ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ' ಎಂದು ಕೇರಳ ಮೂಲದ ಭಾರತೀಯ ಆಯುರ್ವೇದ ವೈದ್ಯ ಎಂ. ಮ್ಯಾಥ್ಯೂ ಮೋದಿ ಅವರನ್ನು ಕೋರಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries