ನವದೆಹಲಿ: ಹವಾಮಾನದ ಬದಲಾವಣೆಗೆ ತಕ್ಕಂತೆ ಒಗ್ಗಿಕೊಳ್ಳುವಂತಹ ಬೀಜಗಳನ್ನು, ಖಾರಿಫ್ ಭತ್ತದ ಬೆಳೆಯ ಶೇ 25ರಷ್ಟು ಪ್ರದೇಶದಲ್ಲಿ ಬಳಸುವ ಗುರಿ ಹೊಂದಲಾಗಿದೆ ಎಂದು ಕೃಷಿ ಸಚಿವಾಲಯ ಸೋಮವಾರ ತಿಳಿಸಿದೆ.
ದೇಶದಲ್ಲಿ ಮಳೆ ಸುರಿಯುವ ಪ್ರಮಾಣ ಹಾಗೂ ಕಾಲದಲ್ಲೂ ವ್ಯತ್ಯಾಸಗಳಾಗಿದ್ದು, ಭತ್ತದ ಉತ್ಪಾದನೆಗೆ ಅಪಾಯವುಂಟಾಗುವುದನ್ನು ತಪ್ಪಿಸಲಿಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
'ಗೋಧಿ ಕೃಷಿಯಲ್ಲಿ ಈಗಾಗಲೇ ಹವಾಮಾನದ ಬದಲಾವಣೆಗೆ ತಕ್ಕಂತೆ ಒಗ್ಗಿಕೊಳ್ಳುವಂತಹ ಬೀಜಗಳ ಬಳಕೆಯಲ್ಲಿ ಶೇ 75ರಷ್ಟು ಪ್ರಗತಿ ಸಾಧಿಸಲಾಗಿದ್ದರೂ, ಭತ್ತದಲ್ಲಿ ಇದರ ಅಳವಡಿಕೆ ಇನ್ನೂ ಸೀಮಿತವಾಗಿದೆ' ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಹಾನಿರ್ದೇಶಕ ಹಿಮಾಂಶು ಪಾಠಕ್ ಮಾಧ್ಯಮಗಳಿಗೆ ತಿಳಿಸಿದರು.
'ಬರ ನಿರೋಧಕ ಹಾಗೂ ಬೆಳೆ ಬಾಗುವಿಕೆಯನ್ನು ತಡೆಗಟ್ಟುವ ಭತ್ತದ ಬೀಜಗಳನ್ನು ಐಸಿಎಆರ್ ಅಭಿವೃದ್ಧಿಪಡಿಸಿದೆ. ಈ ಬೀಜಗಳನ್ನು 2023ರ ಖಾರಿಫ್ ಋತುವಿನಲ್ಲಿ ಒಟ್ಟು ಭತ್ತದ ಬೆಳೆಯ ಪ್ರದೇಶದಲ್ಲಿ 16 ಪ್ರತಿಶತದಷ್ಟು ಬಿತ್ತಲಾಗಿದೆ. ಪ್ರಸಕ್ತ ಋತುವಿನಲ್ಲಿ ಇದನ್ನು ಶೇ 25ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ' ಎಂದು ಹೇಳಿದರು.
100 ಹೊಸ ಪ್ರಭೇದ-ತಂತ್ರಜ್ಞಾನ:
ಕೃಷಿ ಕ್ಷೇತ್ರದ ಬಲವರ್ಧನೆಗಾಗಿ ಐಸಿಎಆರ್ 100 ದಿನದಲ್ಲಿ ತಲಾ 100 ಹೊಸ ಪ್ರಭೇದದ ಬೀಜ ಹಾಗೂ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಈ ವರ್ಷ ಹೆಚ್ಚಿನ ಇಳುವರಿ ನೀಡುವ ಎಣ್ಣೆ ಬೀಜಗಳು ಮತ್ತು ದ್ವಿದಳ ಧಾನ್ಯಗಳ ಪ್ರಭೇದಗಳಿಗೆ ಆದ್ಯತೆ ನೀಡಲಾಗಿದೆ. ಈ ಯೋಜನೆಯಡಿ 174 ಜಿಲ್ಲೆಗಳಿಗೆ ಎಣ್ಣೆ ಬೀಜಗಳ ಕೇಂದ್ರಗಳನ್ನು ವಿಸ್ತರಿಸುವುದು ಹಾಗೂ ನಾಟಿ ಬೀಜಗಳಿಗೆ 130 ಜಿಲ್ಲೆಗಳಲ್ಲಿ ಮಾದರಿ ಗ್ರಾಮ ಕೇಂದ್ರ ರಚಿಸುವುದು ಸೇರಿದೆ' ಎಂದು ಪಾಠಕ್ ಹೇಳಿದರು.