ತಿರುವನಂತಪುರ: ಜುಲೈ ಒಂದರಂದು ಪ್ರಕಟಿಸಲಾದ ರಾಜ್ಯ ಸ್ಥಳೀಯಾಡಳಿತ ಚುನಾವಣೆ ಸಂಬಂಧ ನವೀಕರಿಸಲಾದ ಮತದಾರ ಪಟ್ಟಿಯಂತೆ ರಾಜ್ಯದಲ್ಲಿ ಒಟ್ಟು 2,66,72,979 ಮಂದಿ ಮತದಾರರಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತ ಎ.ಷಹಜಹಾನ್ ಮಾಹಿತಿ ನೀಡಿದರು. ಪಟ್ಟಿಯಲ್ಲಿ 1,26,29,715 ಮಂದಿ ಪುರುಷರು, 1,40,43,026 ಮಂದಿ ಮಹಿಳೆಯರು ಮತ್ತು 238 ಟ್ರಾನ್ಸ್‍ಜೆಂಡರ್‍ಗಳು ಸೇರಿದ್ದಾರೆ. ಜನವರಿ 1 ಅಥವಾ ಅದಕ್ಕಿಂತ ಮೊದಲು 18 ವರ್ಷ ಪೂರೈಸಿದವರನ್ನು ಸೇರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ.
ಸಂಕ್ಷಿಪ್ತ ಪರಿಷ್ಕರಣೆಗಾಗಿ ಜೂನ್ 6 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2,68,57,023 ಮತದಾರರಿದ್ದರು. ಅವರಲ್ಲಿ, ಮರಣ ಅಥವಾ ವಾಸಸ್ಥಳ ಬದಲಾವಣೆಯಿಂದ ಅನರ್ಹರಾಗಿರುವ 4,52,951 ಮಂದಿ ಜನರನ್ನು ಹೊರಗಿಡಲಾಗಿದೆ ಮತ್ತು 2,68,907 ಅರ್ಹರನ್ನು ಅಂತಿಮ ಪಟ್ಟಿಯಲ್ಲಿ ಹೊಸದಾಗಿ ಸೇರಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಜೂನ್ 21 ರವರೆಗೆ ಬಂದಿರುವ ಅರ್ಜಿಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‍ಒ) ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. 14 ಜಿಲ್ಲೆಗಳ 941 ಗ್ರಾಮ ಪಂಚಾಯಿತಿಗಳ 15962 ವಾರ್ಡ್‍ಗಳು, 87 ನಗರಸಭೆಗಳ 3113 ವಾರ್ಡ್‍ಗಳು ಮತ್ತು ಆರು ನಿಗಮಗಳ 414 ವಾರ್ಡ್‍ಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.