ನವದೆಹಲಿ: ಆಫ್ರಿಕಾದ ಹಂದಿ ಜ್ವರ(ಎಎಸ್‌ಎಫ್) ಹರಡುವಿಕೆ ತಡೆಗೆ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಡಕ್ಕಥರನ್ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿ ಜ್ವರ ಹರಡುವಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ತುರ್ತು ಕ್ರಮ ಕೈಗೊಂಡಿದೆ.
ಜ್ವರ ಕಾಣಿಸಿಕೊಂಡ ಸ್ಥಳದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಹಂದಿಗಳನ್ನು ಕೊಂದು, ವಿಲೇವಾರಿ ಮಾಡುವ ಕೆಲಸಕ್ಕೆ ಜುಲೈ 5ರಿಂದಲೇ ತುರ್ತು ಕಾರ್ಯಾಚರಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಕೇಂದ್ರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಡೈರಿ ಸಚಿವಾಲಯ ತಿಳಿಸಿದೆ.
ಮೇ 2020ರಲ್ಲಿ ಮೊದಲ ಬಾರಿಗೆ ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಹಂದಿ ಜ್ವರ ಪತ್ತೆಯಾಗಿತ್ತು. ಆ ಬಳಿಕ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೋಗ ಹರಡಿದೆ.
'ರೋಗ ಪತ್ತೆಯಾದ ಜಾಗದಿಂದ 10 ಕಿ.ಮೀ ವ್ಯಾಪ್ತಿಯಲ್ಲಿಕಾರ್ಯತಂತ್ರದ ಪ್ರಕಾರ ಹೆಚ್ಚುವರಿ ಕಣ್ಗಾವಲಿನ ಅಗತ್ಯವಿದೆ'ಎಂದು ಸಚಿವಾಲಯ ಹೇಳಿದೆ.
'ಎಎಸ್‌ಎಫ್(ಆಫ್ರಿಕಾದ ಹಂದಿ ಜ್ವರ) ಝೂನೋಟಿಕ್ ಅಲ್ಲದ ಕಾರಣ ಮನುಷ್ಯರಿಗೆ ಹರಡಲು ಸಾಧ್ಯವಿಲ್ಲ'ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಲಸಿಕೆಗಳ ಕೊರತೆಯಿಂದಾಗಿ ಪ್ರಾಣಿಗಳ ರೋಗಗಳನ್ನು ನಿರ್ವಹಿಸುವ ಸವಾಲು ಇರುವುದನ್ನು ಕೇಂದ್ರ ಒತ್ತಿ ಹೇಳಿದೆ.
ಆಫ್ರಿಕಾದ ಹಂದಿ ಜ್ವರದ ನಿಯಂತ್ರಣ ಕಾರ್ಯತಂತ್ರವನ್ನು 2020ರಲ್ಲೇ ರೂಪಿಸಲಾಗಿದೆ. ರೋಗ ಹರಡುವಿಕೆ ಕಂಡುಬಂದರೆ ಕೈಗೊಳ್ಳಬೇಕಾದ ಕಂಟೈನ್‌ಮೆಂಟ್ ಕಾರ್ಯತಂತ್ರ ಮತ್ತು ರೆಸ್ಪಾನ್ಸ್ ಪ್ರೋಟೊಕಾಲ್‌ಗಳನ್ನು ಸಹ ವಿವರಿಸಲಾಗಿದೆ.