ಗೊಂಡಾ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ಚಂಡೀಗಢ-ದಿಬ್ರೂಗಢ ಎಕ್ಸ್‌ಪ್ರೆಸ್ ರೈಲು ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 32 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಗೊಂಡಾ-ಗೋರಖಪುರ ವಿಭಾಗದ ಝಿಲಾಯಿ ರೈಲು ನಿಲ್ದಾಣ ಸಮೀಪ ರೈಲಿನ ಎಂಟು ಬೋಗಿಗಳು ಹಳಿತಪ್ಪಿದವು.
'ಅವಘಡದಲ್ಲಿ ಈವರೆಗೆ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ. 32 ಮಂದಿ ಗಾಯಗೊಂಡಿದ್ದು, 12 ಜನರ ಸ್ಥಿತಿ ಗಂಭೀರವಾಗಿದೆ. ಇವರಲ್ಲಿ ಇಬ್ಬರು ಪ್ರಯಾಣಿಕರು ಲಖನೌದ ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಗೊಂಡಾ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ
ಅವಘಡಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ. ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೆ ತಾಂತ್ರಿಕ ತಂಡದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಬೋಗಿಗಳನ್ನು ಹಳಿಯಿಂದ ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.