ದೇಶಾದ್ಯಂತ ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಶೇಕಡ 9-10ರಷ್ಟು ಅಧಿಕ ಮಳೆಯಾಗಿದ್ದು, ಒಟ್ಟಾರೆಯಾಗಿ ಪ್ರಸಕ್ತ ಋತುವಿನಲ್ಲಿ ವಾಡಿಕೆಗಿಂತ ಶೇಕಡ 2ರಷ್ಟು ಅಧಿಕ ಮಳೆ ಬಿದ್ದಿದೆ. ಆದರೂ ಮುಂಗಾರು ಹಂಚಿಕೆಯಲ್ಲಿ ವ್ಯತ್ಯಯವಾಗಿದ್ದು, ಕೇಂದ್ರ ಹಾಗೂ ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗಿದ್ದರೆ, ವಾಯವ್ಯ ಮತ್ತು ಪೂರ್ವ ಭಾಗ ದೊಡ್ಡ ಪ್ರಮಾಣದಲ್ಲಿ ಅಭಾವ ಪರಿಸ್ಥಿತಿ ಎದುರಿಸುತ್ತಿವೆ.
ಮುಂಗಾರಿನ ಸರಿಸುಮಾರು ಅರ್ಧದಷ್ಟು ಅವಧಿಯಲ್ಲಿ ದೇಶದ 742 ಜಿಲ್ಲೆಗಳ ಪೈಕಿ 267 ಜಿಲ್ಲೆಗಳಲ್ಲಿ ಅಂದರೆ ಶೇಕಡ 36ರಷ್ಟು ಜಿಲ್ಲೆಗಳಲ್ಲಿ ಜುಲೈ 30ರವರೆಗೆ ದೊಡ್ಡ ಪ್ರಮಾಣದ ಅಭಾವ ಪರಿಸ್ಥಿತಿ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜಾರ್ಖಂಡ್ ರಾಜ್ಯದ 24, ಬಂಗಾಳದ ಗಂಗಾನದಿ ತೀರದ 15, ಬಿಹಾರದ ಒಟ್ಟು 38 ಜಿಲ್ಲೆಗಳ ಪೈಕಿ 33, ಪಂಜಾಬ್ ಮತ್ತು ಹರ್ಯಾಣದ 22 ಜಿಲ್ಲೆಗಳ ಪೈಕಿ 19 ಜಿಲ್ಲೆಗಳು, ದೆಹಲಿಯ ಒಂಬತ್ತು ಜಿಲ್ಲೆಗಳ ಪೈಕಿ ಐದು, ಹಿಮಾಚಲ ಪ್ರದೇಶದ 12 ಜಿಲ್ಲೆಗಳ ಪೈಕಿ 9 ಮತ್ತು ಜಮ್ಮು ಕಾಶ್ಮೀರದ 20 ಜಿಲ್ಲೆಗಳ ಪೈಕಿ 15 ಜಿಲ್ಲೆಗಳು ಅಭಾವ ಪರಿಸ್ಥಿತಿ ಎದುರಿಸುತ್ತಿವೆ.
ಅಭಾವ ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ 232 ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಶೇಕಡ 20 ರಿಂದ ಶೇಕಡ 59ರಷ್ಟು ಅಭಾವ ಇದ್ದರೆ, 35 ಜಿಲ್ಲೆಗಳಲ್ಲಿ ವಾಡಿಕೆ ಮಳೆಯ ಶೇಕಡ 60ಕ್ಕಿಂತ ಹೆಚ್ಚು ಅಭಾವ ತಲೆದೋರಿದೆ. ಇದನ್ನು ಹೊರತುಪಡಿಸಿದರೆ 245 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ ಮತ್ತು 230 ಜಿಲ್ಲೆಗಳಲ್ಲಿ ಅಧಿಕ ಅಥವಾ ಅತ್ಯಧಿಕ ಮಳೆಯಾಗಿದೆ.
ಮಳೆ ನಕ್ಷೆಯಲ್ಲಿ ಪ್ರಮುಖವಾಗಿ ಅಭಾವ ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ ಬಹುತೇಕ ಜಿಲ್ಲೆಗಳು ಪೂರ್ವ ಭಾರತ ಮತ್ತು ವಾಯವ್ಯ ಭಾರತದಲ್ಲಿವೆ. ಈ ಪ್ರದೇಶಗಳಲ್ಲಿ ನಿರಂತರವಾಗಿ ಕಡಿಮೆ ಮಳೆಯಾಗುತ್ತಿದೆ. ದಕ್ಷಿಣ ರಾಜಸ್ಥಾನದ ಕೆಲ ಭಾಗಗಳಲಿ ಮತ್ತು ಈಶಾನ್ಯ ಭಾರತದ ಕೆಲವೆಡೆ ಕೂಡಾ ಮಳೆ ಅಭಾವ ಪರಿಸ್ಥಿತಿ ಇದೆ.