ಜೈಪುರ: ನಾಲ್ಕು ಚಕ್ರಗಳ ವಾಹನಗಳ ತೂಕ ಕೇವಲ 3 ಕೆ.ಜಿ., ಕಾರಿನ ಸೀಟುಗಳ ಸಾಮರ್ಥ್ಯ 50, ಅಲ್ಲದೆ, ಖರೀದಿ ದಿನಾಂಕಕ್ಕೂ ಮೊದಲೇ ವಾಹನಗಳ ನೋಂದಣಿ!
-ಇವು ರಾಜಸ್ಥಾನದ ಸಾರಿಗೆ ಇಲಾಖೆಯಲ್ಲಿ ಆಗಿರುವ 'ಮಹಾ ಪ್ರಮಾದಗಳು'. ಈ ಪ್ರಮಾದಗಳನ್ನು ಈಗ ಮಹಾಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.
ರಾಜಸ್ಥಾನದ ಸಾರಿಗೆ ಇಲಾಖೆಯ ವಾಹನ ಮತ್ತು ಸಾರಥಿ ಪೋರ್ಟಲ್‌ಗಳಲ್ಲಿ ಸೊನ್ನೆಯಿಂದ 3 ಕೆ.ಜಿ ತೂಕದ 15,570 ವಾಹನಗಳನ್ನು ನೋಂದಣಿ ಮಾಡಿರುವುದನ್ನು ತೋರಿಸಲಾಗಿದೆ ಎಂದು ರಾಜಸ್ಥಾನ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾದ ಸಿಎಜಿ ವರದಿ ತಿಳಿಸಿದೆ.
ವಾಹನ ಪೋರ್ಟಲ್‌ನಲ್ಲಿ 119 ವಾಹನಗಳನ್ನು ಖರೀದಿಸುವ ದಿನಾಂಕದ ಮೊದಲು ನೋಂದಾಯಿಸಿರುವುದು ಮತ್ತು 14 ವಾಹನಗಳಿಗೆ 1 ಲಕ್ಷ ಕೆ.ಜಿ.ಗಿಂತ ಹೆಚ್ಚು ತೂಕ ದಾಖಲಿಸಿರುವುದು, ನಕಲಿ ಚಾಸಿಸ್ ಅಥವಾ ಎಂಜಿನ್ ಸಂಖ್ಯೆಗಳೊಂದಿಗೆ 712 ವಾಹನಗಳನ್ನು ಸಾರಿಗೆ ಇಲಾಖೆಯು ನೋಂದಾಯಿಸಿರುವುದನ್ನು ಸಿಎಜಿ ಪತ್ತೆ ಮಾಡಿದೆ.
ನೋಂದಣಿಯಾದ 1,219 ವಾಹನಗಳಲ್ಲಿ ನಮೂದಿಸಿರುವ ಆಸನ ಸಾಮರ್ಥ್ಯದಲ್ಲೂ ದೋಷ ಕಂಡುಬಂದಿದೆ. ಇವುಗಳಲ್ಲಿ 120 ಸರಕು ವಾಹನಗಳು, ಇವು 10ರಿಂದ 100 ಪ್ರಯಾಣಿಕರವರೆಗಿನ ಆಸನ ಸಾಮರ್ಥ್ಯ ಹೊಂದಿವೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ಏಳು ಕಾರುಗಳ ದಾಖಲೆಯಲ್ಲಿ ಇವು 10ರಿಂದ 50 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವುದಾಗಿ ತೋರಿಸಲಾಗಿದೆ. 10ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಬಸ್‌ಗಳಂತಹ 1,018 ಪ್ರಯಾಣಿಕ ವಾಹನಗಳು ಕೇವಲ ಒಂದರಿಂದ ಮೂರು ಪ್ರಯಾಣಿಕ ಆಸನಗಳನ್ನು ಮಾತ್ರ ಹೊಂದಿವೆ ಎಂದು ತಪ್ಪಾಗಿ ತೋರಿಸಲಾಗಿದೆ.
ಅಲ್ಲದೆ, ಸಾರಥಿ ಪೋರ್ಟಲ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 166 ಮಂದಿಗೆ ಕಲಿಕಾ ಪರವಾನಗಿ ನೀಡಲಾಗಿದೆ. ಇದು ನಿಯಮಗಳಿಗೆ ವಿರುದ್ಧ ಎಂದು ವರದಿ ತಿಳಿಸಿದೆ.
ರಾಜಸ್ಥಾನದಲ್ಲಿ 2016ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗೆ ವಾಹನ ಮತ್ತು ಸಾರಥಿ ಬಳಕೆಯ 10.14 ಲಕ್ಷ ಪ್ರಕರಣಗಳನ್ನು ಸಿಎಜಿ ಲೆಕ್ಕಪರಿಶೋಧನೆ ನಡೆಸಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ಒಳಗೊಂಡ ಲೆಕ್ಕಪರಿಶೋಧನಾ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
'ತಪ್ಪುಗಳನ್ನು ಸರಿಪಡಿಸಲು ಸೂಚನೆ ನೀಡಿರುವುದಾಗಿ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ಉತ್ತರ ನೀಡಿದೆ. ಇಲಾಖೆಯು ತೆಗೆದುಕೊಂಡ ಕ್ರಮವನ್ನು ನಿರ್ಣಯಿಸಲು, ಈ ಪ್ರಕರಣಗಳನ್ನು ಪರಿಶೀಲಿಸಲಾಯಿತು. ಆದರೆ, ಈ ಅಕ್ರಮಗಳನ್ನು ಇನ್ನೂ ಸರಿಪಡಿಸಿಲ್ಲ' ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಇಂತಹ ವ್ಯವಸ್ಥಿತ ದೌರ್ಬಲ್ಯಗಳನ್ನು ಗುರುತಿಸಿ, ಸರಿಪಡಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಸಿಎಜಿ ಶಿಫಾರಸು ಮಾಡಿದೆ.
'ವಾಹನ ಮತ್ತು ಸಾರಥಿ ಪೋರ್ಟಲ್‌ಗಳನ್ನು ಮೋಟಾರು ವಾಹನ ಕಾಯ್ದೆ 1988 ಮತ್ತು ಮೋಟಾರು ವಾಹನ ನಿಯಮಗಳ ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಲು ವಿನ್ಯಾಸಗೊಳಿಸಲಾಗಿದೆ. ನಿಯಮಗಳನ್ನು ಸರಿಯಾಗಿ ಪಾಲಿಸದೆ, ಪ್ರಮಾದ ಎಸಗಿರುವ ಅನೇಕ ನಿದರ್ಶನಗಳು ಪರಿಶೀಲನೆಯಲ್ಲಿ ಬಹಿರಂಗಗೊಂಡಿವೆ' ಎಂದು ಸಿಎಜಿ ಹೇಳಿದೆ.