ಢಾಕಾ: ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ವಿದ್ಯಾರ್ಥಿ ಸಂಘಟನೆಯು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.
ಮೀಸಲಾತಿಯನ್ನು ಕಡಿತಗೊಳಿಸಿ ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ಭಾನುವಾರ ಆದೇಶಿಸಿದ ಬೆನ್ನಲ್ಲೇ ಪ್ರತಿಭಟನಾ ನಿರತ ಸಂಘಟನೆಯು ಸೋಮವಾರ ಈ ನಿರ್ಧಾರವನ್ನು ಪ್ರಕಟಿಸಿದೆ.
'ನಾವು 48 ಗಂಟೆಗಳ ಕಾಲ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದೇವೆ. ಈ ಸಮಯದಲ್ಲಿ ಸರ್ಕಾರವು ಕರ್ಫ್ಯೂವನ್ನು ಹಿಂತೆಗೆದುಕೊಳ್ಳಬೇಕು. ಇಂಟರ್‌ನೆಟ್ ಸೇವೆಯನ್ನು ಮರುಸ್ಥಾಪಿಸಬೇಕು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು' ಎಂದು ಸಂಘಟನೆಯ ಪ್ರಮುಖ ನಾಯಕ ನಹೀದ್ ಇಸ್ಲಾಂ ಹೇಳಿದರು.
ಇಂಟರ್‌ನೆಟ್ ಮರುಸ್ಥಾಪನೆ ಇಲ್ಲ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಸುಧಾರಿಸಿದ್ದು ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಆದರೂ, ಇಂಟರ್‌ನೆಟ್ ಸೇವೆ ಮತ್ತು ಮೊಬೈಲ್ ಡೇಟಾವನ್ನು ಸರ್ಕಾರ ಪುನರಾರಂಭಿಸಿಲ್ಲ.
ಸರ್ಕಾರವು ಸೋಮವಾರ ದೇಶದಾದ್ಯಂತ ಸಾರ್ವಜನಿಕ ರಜೆ ಘೋಷಿಸಿತ್ತು. ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಈ ವೇಳೆ ಕರ್ಫ್ಯೂ ಸಹ ಮುಂದುವರಿದಿತ್ತು.
ಸರ್ಕಾರಿ ಹುದ್ದೆಗಳ ಭರ್ತಿ ವೇಳೆ, 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾ ಸಿಬ್ಬಂದಿಯ ಮಕ್ಕಳು ಮತ್ತು ಸಂಬಂಧಿಕರಿಗೆ ನೀಡಲಾಗಿದ್ದ ಶೇ30ರಷ್ಟು ಕೋಟಾವನ್ನು ಕೊನೆಗೊಳಿಸಬೇಕೆಂದು ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ನಡೆದ ಹಿಂಸಾಚಾರದಲ್ಲಿ ಈವರೆಗೆ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ದಿನ ಪತ್ರಿಕೆಗಳು ವರದಿ ಮಾಡಿವೆ. ಆದರೆ, ಸತ್ತವರ ಸಂಖ್ಯೆ ಎಷ್ಟು ಎಂಬುದನ್ನು ಸರ್ಕಾರ ಇದುವರೆಗೂ ಬಹಿರಂಗಪಡಿಸಿಲ್ಲ.