ನವದೆಹಲಿ: ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ ಅತಿ ಹೆಚ್ಚು 628 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ನವದೆಹಲಿ: ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ ಅತಿ ಹೆಚ್ಚು 628 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಆನೆ ದಾಳಿಯಿಂದಾಗಿ ವಿವಿಧ ರಾಜ್ಯಗಳಲ್ಲಿ 2019ರಲ್ಲಿ 587, 2020ರಲ್ಲಿ 471, 2021ರಲ್ಲಿ 557, 2022ರಲ್ಲಿ 610 ಮತ್ತು 2023ರಲ್ಲಿ 628 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಆನೆ ದಾಳಿಯಿಂದಾಗಿ ಒಡಿಶಾದಲ್ಲಿ 624, ಜಾರ್ಖಂಡ್‌ನಲ್ಲಿ 474, ಪಶ್ಚಿಮ ಬಂಗಾಳದಲ್ಲಿ 436, ಅಸ್ಸಾಂನಲ್ಲಿ 383, ಛತ್ತೀಸಗಢದಲ್ಲಿ 303, ತಮಿಳುನಾಡಿನಲ್ಲಿ 256, ಕರ್ನಾಟಕದಲ್ಲಿ 160, ಕೇರಳದಲ್ಲಿ 124 ಮಂದಿ ಪ್ರಾಣ ಕಳೆದುಕೊಂಡಿರುವುದು ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.
ವನ್ಯಜೀವಿ ಆವಾಸಸ್ಥಾನಗಳ ನಿರ್ವಹಣೆಯು ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರವು ಹುಲಿ ಮತ್ತು ಆನೆ ಯೋಜನೆಯಡಿಯಲ್ಲಿ ಪ್ರಾಣಿಗಳು, ಅವುಗಳ ಆವಾಸಸ್ಥಾನಗಳು ಮತ್ತು ಕಾರಿಡಾರ್‌ಗಳ ರಕ್ಷಣೆಗಾಗಿ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ ಎಂದು ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
ಆನೆ ದಾಳಿಯಿಂದಾಗಿ ಬೆಳೆಗಳಿಗೆ ಹಾನಿ ಆಗಿರುವುದು ಸೇರಿದಂತೆ ಮಾನವ-ವನ್ಯಜೀವಿ ಸಂಘರ್ಷಗಳನ್ನು ನಿಯಂತ್ರಿಸುವ ಕುರಿತು ಪರಿಸರ ಸಚಿವಾಲಯವು ಈಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.