ಕಾಸರಗೋಡು: ಸಪ್ಲೈಕೋ ಸಂಸ್ಥೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 50 ಹೊಸ ಮಾವೇಲಿ ಸ್ಟೋರ್ ಮಳಿಗೆಗಳನ್ನು ತೆರೆಯಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಖಾತೆ ಸಚಿವ ಜಿ.ಆರ್.ಅನಿಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪುದುಕೈ ಚೇಡಿ ರಸ್ತೆಯಲ್ಲಿ ಆರಂಭಿಸಲಾದ ನೂತನ ಮಾವೇಲಿ ಸ್ಟೋರ್ ಉದ್ಘಾಟಿಸಿ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 99 ಸಪ್ಲೈಕೋ ಮಳಿಗೆ ಆರಂಭಿಸಲಾಗಿದ್ದು, ಚೇಡಿ ರಸ್ತೆಯಲ್ಲಿ 99ನೇ ಮಾವೇಲಿ ಮಳಿಗೆ ಉದ್ಘಾಟನೆಗೊಂಡಿದೆ. ಕಡಿಮೆ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಯಲು ಸಪ್ಲೈಕೋ ಸಹಾಯ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಅವರು ಕೆ.ವಿ.ಅಂಬುಞÂ ಅವರಿಗೆ ಮೊದಲ ಮಾರಾಟ ನಡೆಸಿದರು. ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಪ್ರಭಾವತಿ, ನಗರಸಭಾ ಸದಸ್ಯರಾದ ಎನ್.ವಿ.ರಾಜನ್, ಪಳ್ಳಿಕಾಯಿ ರಾಧಾಕೃಷ್ಣನ್, ಪಿ.ವಿ.ಮೋಹನನ್, ಕೆ.ರವೀಂದ್ರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಕೀಲ ಕೆ.ರಾಜಮೋಹನ್, ಕೆ.ಪಿ.ಬಾಲಕೃಷ್ಣನ್, ಸಿ.ಕೆ.ಬಾಬುರಾಜ್, ಅಬ್ದುಲ್ ರಜಾಕ್ ತಾಯಲಕಂಡಿ, ಕೆ.ಪಿ.ಟಾಮಿ, ವಕೀಲ ವೆಂಕಟೇಶ್, ಪಿ. ಪಣಂಗಾವ್ ಕೃಷ್ಣನ್, ಉದಿನೂರು ಸುಕುಮಾರನ್, ಪ್ರಮೋದ್ ಕರುವಾಲಂ, ಪಿ.ಕೆ.ನಾಸರ್, ರತೀಶ್ ಪುದಿಯಪುರತ್, ಸುರೇಶ ಪುತೇಡತ್, ಆಂಟೆಕ್ಸ್ ಜೋಸೆಫ್ ಉಪಸ್ಥಿತರಿದ್ದರು. ಸಪ್ಲೈಕೋ ಪ್ರಾದೇಶಿಕ ವ್ಯವಸ್ಥಾಪಕ ಪಿ.ಸಿ.ಅನುಪ್ ಸ್ವಾಗತಿಸಿದರು. ಜಿಲ್ಲಾ ನಾಗರಿಕಪೂರೈಕೆ ಅಧಿಕಾರಿ ಕೆ.ಎನ್.ಬಿಂದು ವಂದಿಸಿದರು.