ಕಾಸರಗೋಡು: ಕೆಂಪುಕಲ್ಲು ಕಾರ್ಮಿಕರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ತೋರುವ ನಿರ್ಲಕ್ಷ್ಯ ಪ್ರತಿಭಟಿಸಿ ಆಗಸ್ಟ್ 5ರಿಂದ ರಾಜ್ಯ ವ್ಯಾಪಕವಾಗಿ ಕೆಂಪುಕಲ್ಲು ಕ್ವಾರೆ ಮುಚ್ಚಿ ನಿರ್ಧಿಷ್ಟಾವಧಿ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದರ ಪೂರ್ವಭಾವಿಯಾಗಿ ಜುಲೈ 22ರಂದು ರಾಜ್ಯಾದ್ಯಂತ ಸೂಚನಾ ಮುಷ್ಕರ ಹಾಗೂ 30ರಂದು ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಕೆಂಪು ಕಲ್ಲು ಮಲಿಕರ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣನ್ ಕೊಳತ್ತೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೆಂಪುಕಲ್ಲು ಕ್ವಾರಿ ಮಾಲಿಕರು ಎದುರಿಸುತ್ತಿರುವ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ. 2023ರ ಫೆಬ್ರವರಿ 1ರಂದು ರಾಜ್ಯಾದ್ಯಂತ ಕ್ವಾರೆಗಳನ್ನು ಮುಚ್ಚಿ ನಡೆಸಲಾದ ಮುಷ್ಕರದ ಹಿನ್ನೆಲೆಯಲ್ಲಿ ಕೈಗಾರಿಕಾ ಸಚಿವರ ಭರವಸೆಯನ್ವಯ ಮುಷ್ಕರ ಕೈಬಿಡಲಾಗಿತ್ತು. ಈ ಸಂದರ್ಭ ಕ್ವಾರೆ ಮಾಲಿಕರ ಸಮಸ್ಯೆ ಅಧ್ಯಯನಕ್ಕಾಗಿ ಸಮಿತಿ ರಚಿಸಿ, ಈ ವರದಿ ಸರ್ಕಾರಕ್ಕೆ ಸಲ್ಲಿಸಿ ವರ್ಷ ಕಳೆದರೂ ಯಾವುದೇ ಕ್ರಮವುಂಟಾಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ 400 ಕೆಂಪುಕಲ್ಲು ಕ್ವಾರಿಗಳ ಪೈಕಿ 13 ಕ್ವಾರಿಗಳಿಗೆ ಮಾತ್ರ ಪರವಾನಗಿ ಮಂಜೂರಾಗಿದೆ. ಇದಕ್ಕೂ ವರ್ಷಗಳ ಕಾಳ ಕಾಯಬೇಕಾಗುತ್ತದೆ. ಇತರೆ ಕ್ವಾರಿಗಳಿಗೆ ಜಮೀನಿನ ಹಕ್ಕುಪತ್ರಗಳ ಹೆಸರಿನಲ್ಲಿ ಪರವಾನಗಿ ನೀಡದೆ 10ರಿಂದ 15 ಲಕ್ಷ ರೂ. ವರೆಗೂ ದಂಡ ವಸೂಲಿ ಮಾಡಲಾಗುತ್ತಿದೆ. 2023 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ 75000 ಇದ್ದ ಪರವಾನಗಿ ಶುಲ್ಕ 5ಲಕ್ಷ ವರೆಗೂ ಏರಿಸಲಾಗಿದೆ. ಆದರೂ ಪರವಾನಗಿ ನೀಡದೆ ಸತಾಯಿಸುವ ಸರ್ಕಾರ ಈ ಹೆಸರಲ್ಲಿ ಮೂರು ಪಟ್ಟು ಹೆಚ್ಚಿನ ದಂಡ ವಸೂಲಿ ನಡೆಸಲಾಗುತ್ತಿದೆ. ಸರ್ಕಾರದ ಧೋರಣೆ ಇದೇ ರೀತಿ ಮುಂದುವರಿದಲ್ಲಿ ಇಡೀ ರಾಜ್ಯದಲ್ಲಿ ಕೆಂಪುಕಲ್ಲು ಉದ್ದಿಮೆ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸುಮಾರು 2000 ಉದ್ಯೋಗದಾತರು ಹಾಗೂ ನೇರವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅರ್ಧ ಲಕ್ಷ ಕಾರ್ಮಿಕರು, ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲಾಧ್ಯಕ್ಷ ಸುಧಾಕರ ಪೂಜಾರಿ, ಕಾಸರಗೋಡು ಕ್ಷೇತ್ರಸಮಿತಿ ಅಧ್ಯಕ್ಷ ಕೆ ಸುಕುಮಾರನ್ ನಾಯರ್, ಜಿಲ್ಲಾ ಕಾರ್ಯದರ್ಶಿ ಹುಸೇನ್ ಬೇರ್ಕ, ಮಂಜೇಶ್ವರ ಏರಿಯಾ ಕಾರ್ಯದರ್ಶಿ ಹರೀಶ್ ಶೆಟ್ಟಿ, ಕಯ್ಯಾರು ಘಟಕ ಅಧ್ಯಕ್ಷ ರಫೀಕ್ ಉಪಸ್ಥಿತರಿದ್ದರು.