ನವದೆಹಲಿ: ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಐದು ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ.
ಈ ಕುರಿತು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸರ್ಕಾರ ತಿಳಿಸಿದೆ.
ಉತ್ತರ ಪ್ರದೇಶದ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು 1.18 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ 84,045 ಪ್ರಕರಣಗಳು...
ಸುಪ್ರೀಂ ಕೋರ್ಟ್‌ನಲ್ಲಿ 84,045 ಮತ್ತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 60,11,678 ಪ್ರಕರಣಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.
ಇನ್ನು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಲ್ಲಿ 4,53,51,913 ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಚಿವರು ತಿಳಿಸಿದ್ದಾರೆ.
ಹಲವಾರು ಕಾರಣಗಳಿಂದಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಕಟ್ಟಡಗಳಲ್ಲಿ ಮೂಲಸೌಕರ್ಯ ಮತ್ತು ನ್ಯಾಯಾಲಯದ ಸಿಬ್ಬಂದಿಯ ಲಭ್ಯತೆ, ಸಾಕ್ಷ್ಯದ ಸ್ವರೂಪ ಮತ್ತು ಬಾರ್ ಅಸೋಸಿಯೇಷನ್, ತನಿಖಾ ಸಂಸ್ಥೆಗಳು, ಸಾಕ್ಷಿಗಳು ಹಾಗೂ ಕಕ್ಷಿದಾರರು ಒಳಗೊಂಡಂತೆ ಸಂಬಂಧಪಟ್ಟ ಭಾಗೀದಾರರ ಸಹಕಾರ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಚಿವರು ಹೇಳಿದರು.
ವಿವಿಧ ರೀತಿಯ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯಗಳು ನಿಗದಿತ ಕಾಲಮಿತಿ ನಿಗದಿಪಡಿಸದೇ ಇರುವುದು, ವಿಚಾರಣೆಯನ್ನು ಆಗಿಂದಾಗ್ಗೆ ಮುಂದೂಡುವುದು ಮತ್ತು ಪ್ರಕರಣಗಳ ಮೇಲ್ವಿಚಾರಣೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕೂಡಾ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಕಾರಣವಾಗಿವೆ ಎಂದಿದ್ದಾರೆ.