ಪಾಕುರ್: ಜಾರ್ಖಂಡ್‌ನ ಪಾಕುರ್ ಜಿಲ್ಲೆಯಲ್ಲಿ ಕಾನೂನು ಪರಿಪಾಲಕರು ಮತ್ತು ಬುಡಕಟ್ಟು ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ಆರು ಪೊಲೀಸ್ ಸಿಬ್ಬಂದಿ ಸೇರಿದಂತೆ 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅಪಹರಣ ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡ ಕೆಕೆಎಂ ಕಾಲೇಜು ಕ್ಯಾಂಪಸ್‌ಗೆ ಆಗಮಿಸಿದಾಗ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.
ಕಾಲೇಜು ಆವರಣದಲ್ಲಿರುವ ಬುಡಕಟ್ಟು ಹಾಸ್ಟೆಲ್‌ನ ವಿದ್ಯಾರ್ಥಿಗಳ ಗುಂಪೊಂದು ಕ್ಯಾಂಪಸ್‌ಗೆ ಪೊಲೀಸರ ಪ್ರವೇಶವನ್ನು ವಿರೋಧಿಸಿತು. ಇದು ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಮಹೇಶ್‌ಪುರ ಪ್ರದೇಶದಲ್ಲಿ ಬಾಂಗ್ಲಾದೇಶದ ಒಳನುಸುಳುವಿಕೆ ವಿರುದ್ಧ ಪ್ರತಿಭಟನಾ ರ್‍ಯಾಲಿ ನಡೆಸಲು ಉದ್ದೇಶಿಸಲಾಗಿದ್ದ ಬುಡಕಟ್ಟು ವಿದ್ಯಾರ್ಥಿಗಳನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಸರಿ ಪಕ್ಷ ಆಗ್ರಹಿಸಿದೆ.
ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದು, ಅವರೆಲ್ಲರೂ ಪಾಕುರ್‌ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಾಸ್ಟೆಲ್‌ನ ವಿದ್ಯಾರ್ಥಿಗಳು ಹೇಳಿದ್ದಾರೆ. ತಮ್ಮ ವಿರೋಧದ ನಡುವೆಯೂ ಪೊಲೀಸರು ಬಲವಂತವಾಗಿ ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.