ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಜುಲೈ 6 ಮತ್ತು 7 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. 6ರಂದು ಬೆಳಗ್ಗೆ 10.50ಕ್ಕೆ ತಿರುವನಂತಪುರಂಗೆ ಆಗಮಿಸಿ, ಬೆಳಗ್ಗೆ 11.30ಕ್ಕೆ ವಲಿಯಮಲ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಎಸ್‍ಟಿ) 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಪಕುಲಪತಿಗಳು ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದಾರೆ. ಇಸ್ರೋ ಅಧ್ಯಕ್ಷ ಮತ್ತು ಐಐಎಸ್‍ಟಿ ಆಡಳಿತ ಮಂಡಳಿ ಅಧ್ಯಕ್ಷ ಎಸ್ ಸೋಮನಾಥ್, ಕುಲಪತಿ ಡಾ.ಬಿ.ಎನ್.ಸುರೇಶ್, ಐಐಎಸ್‍ಟಿ ನಿರ್ದೇಶಕ ಡಾ. ಉಣ್ಣಿಕೃಷ್ಣನ್ ನಾಯರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭದ ನಂತರ ಮಧ್ಯಾಹ್ನ 3.10ಕ್ಕೆ ಕೊಲ್ಲಂಗೆ ಹೊರಟು ಸಂಜೆ 5.30ಕ್ಕೆ ಅಷ್ಟಮುಡಿ ಹಿನ್ನೀರಿನಲ್ಲಿ ದೋಣಿ ವಿಹಾರ ನಡೆಯಲಿದೆ. ರಾತ್ರಿ ಕೊಲ್ಲಂನಲ್ಲಿ ತಂಗಲಿರುವ ಉಪರಾಷ್ಟ್ರಪತಿಗಳು 7ರಂದು ಬೆಳಗ್ಗೆ 9 ಗಂಟೆಗೆ ತಿರುವನಂತಪುರಕ್ಕೆ ತೆರಳಲಿದ್ದಾರೆ. ಕೇರಳ ಪ್ರವಾಸ ಮುಗಿಸಿ ಬೆಳಗ್ಗೆ 9.55ಕ್ಕೆ ತಿರುವನಂತಪುರದಿಂದ ದೆಹಲಿಗೆ ಹಿಂತಿರುಗುವರು.