ವಾಷ್ಟಿಂಗ್ಟನ್: ಅಮೆರಿಕದ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರಿಗಿಂತಲೂ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಶೇಕಡ 6ರಷ್ಟು ಮುನ್ನಡೆ ಗಳಿಸಿದ್ದಾರೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ಸಮೀಕ್ಷೆ ತಿಳಿಸಿದೆ.
ಬೈಡನ್ ಹಾಗೂ ಟ್ರಂಪ್ ನಡುವಣ ಮುಖಾಮುಖಿ ಚರ್ಚೆಯ ಬಳಿಕ ನಡೆದ ಹೊಸ ಸಮೀಕ್ಷಾ ವರದಿ ಹೊರಬಿದ್ದಿದೆ.
ಟ್ರಂಪ್ ಅವರು ಶೇಕಡ 48ರಷ್ಟು ಮತದಾರರ ಬೆಂಬಲವನ್ನು ಹೊಂದಿದ್ದು, ಬೈಡನ್ ಅವರಿಗೆ ಶೇ 42ರಷ್ಟು ಬೆಂಬಲವಿದೆ. ಕಳೆದ ಫೆಬ್ರುವರಿಯಲ್ಲಿ ಇಬ್ಬರ ನಡುವಣ ಅಂತರ ಕೇವಲ ಶೇ 2ರಷ್ಟಾಗಿತ್ತು. ಆ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್‌ಗಿಂತಲೂ ಟ್ರಂಪ್ ಮತ್ತಷ್ಟು ಮುನ್ನಡೆ ಸಾಧಿಸಿದ್ದಾರೆ ಎಂದು ವರದಿ ಹೇಳಿದೆ.
'ದಿ ವಾಲ್ ಸ್ಟ್ರೀಟ್ ಜರ್ನಲ್' ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ, ಎರಡನೇ ಅವಧಿಗೆ ಸರ್ಕಾರ ನಡೆಸಲು ಬೈಡನ್ ಅವರಿಗೆ ತುಂಬಾ ವಯಸ್ಸಾಗಿದೆ ಎಂದು ಶೇ 80ರಷ್ಟು ಮಂದಿ ಅಭಿಪ್ರಾಯಪಡುತ್ತಾರೆ ಎಂದು ಹೇಳಿದೆ.
ಸಮೀಕ್ಷೆಯ ಪ್ರಕಾರ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಅಷ್ಟೊಂದು ಜನಪ್ರಿಯವಾಗಿಲ್ಲ ಎಂದು ಹೇಳಿದೆ. ಇವೆಲ್ಲವೂ ಅಧಿಕಾರ ಮರಳಿ ಪಡೆಯುವ ಇರಾದೆ ಹೊಂದಿರುವ ಡೆಮಾಕ್ರಟಿಕ್ ಪಕ್ಷಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ತಿಳಿಸಿದೆ.