HEALTH TIPS

ಬ್ಯಾಂಕಾಕ್‌ ಐಷಾರಾಮಿ ಹೋಟೆಲ್‌ನಲ್ಲಿ 6 ವಿದೇಶಿಗರ ನಿಗೂಢ ಸಾವು: ಕಾರಣ ಬಹಿರಂಗ

         ಬ್ಯಾಂಕಾಕ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಐಷಾರಾಮಿ ಹೋಟೆಲ್ ಒಂದರಲ್ಲಿ ಏಕಕಾಲದಲ್ಲಿ ಸಂಭವಿಸಿದ್ದ ಆರು ವಿದೇಶಿಯರ ನಿಗೂಢ ಸಾವಿನ ಪ್ರಕರಣಕ್ಕೆ ಥಾಯ್ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಾರಣ ಕಂಡುಕೊಂಡಿದ್ದಾರೆ.

          ಮಂಗಳವಾರ ಸೆಂಟ್ರಲ್ ಬ್ಯಾಂಕಾಕ್‌ನ ಐಷಾರಾಮಿ ಹೋಟೆಲ್ 'ದಿ ಗ್ರ್ಯಾಂಡ್ ಹಯಾತ್'ನ ಕೋಣೆಯೊಂದರಲ್ಲಿ ನಾಲ್ಕು ಜನ ವಿಯೆಟ್ನಾಂ ಹಾಗೂ ಇಬ್ಬರು ಅಮೆರಿಕ ಪ್ರಜೆಗಳ ಮೃತದೇಹಗಳು ಪತ್ತೆಯಾಗಿದ್ದವು.

         ಆರಂಭದಲ್ಲಿ ಶೂಟೌಟ್‌ನಿಂದ ಈ ಹತ್ಯೆಗಳು ನಡೆದಿದ್ದವು ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಪ್ರವಾಸಿಗರು ಬೆಚ್ಚಿಬಿದ್ದಿದ್ದರು.

             ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಥಾಯ್ ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಗಳು ಸಿಕ್ಕಿದ್ದು ಸೈನೈಡ್ ಸೇವನೆಯಿಂದ ಈ ಸಾವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.

              ಮೃತರು ಕುಡಿದಿದ್ದ ಟೀ ಕಪ್‌ ಹಾಗೂ ಮೃತದೇಹಗಳಲ್ಲಿ ಸೈನೈಡ್ ಅಂಶ ಇರುವುದು ಕಂಡು ಬಂದಿದೆ ಎಂದು ಥಾಯ್ ಪೊಲೀಸ್ ಪಡೆಗಳ ಮುಖ್ಯಸ್ಥ ಜನರಲ್ ಟ್ರಯರೋಂಗ್ ಪಿಪ್‌ವಾನ್ ತಿಳಿಸಿದ್ದಾರೆ.

        ಮೃತರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಿದ್ದಾರೆ. ಇವರೆಲ್ಲ ದಂಪತಿಗಳಾಗಿದ್ದರು. ಅಮೆರಿಕ ದಂಪತಿ ವಿಯೆಟ್ನಾಂ ದಂಪತಿಗಳ ಜೊತೆ ಸೋಮವಾರ ಹೋಟೆಲ್‌ಗೆ ಬಂದು ತಂಗಿದ್ದರು ಎಂದು ತಿಳಿಸಿದ್ದಾರೆ.

          ಅಮೆರಿಕ ದಂಪತಿ ಜಪಾನ್‌ನಲ್ಲಿ ಹಣಕಾಸಿನ ಹೂಡಿಕೆ ಸಂಬಂಧ ಮಾತುಕತೆ ನಡೆಸಲು ವಿಯೆಟ್ನಾಂ ದಂಪತಿಗಳ ಜೊತೆ ಸಂಪರ್ಕ ಬೆಳೆಸಿದ್ದರು. ಭಾರಿ ಪ್ರಮಾಣದ ಹಣಕಾಸಿನ ವಿಚಾರಕ್ಕಾಗಿ ಇವರ ನಡುವೆ ವೈಮನಸ್ಸು ಬಂದಿತ್ತು ಎನ್ನಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮೃತರ ಕುಟುಂಬಗಳನ್ನು ಸಂಪರ್ಕಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

           ಅಮೆರಿಕ ದಂಪತಿ ಸೈನೈಡ್ ಬೆರೆಸಿ, ತಾವೂ ಅದನ್ನು ಸೇವಿಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

          ಈ ಕುರಿತಂತೆ ಥಾಯ್ ಪೊಲೀಸರು ಈಗಾಗಲೇ ವಿಯೆಟ್ನಾಂ ಹಾಗೂ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ತನಿಖೆಗೆ ಸಹಕಾರ ನೀಡುವುದಾಗಿ ರಾಯಭಾರ ಕಚೇರಿಗಳು ತಿಳಿಸಿವೆ.

             ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಈ ಸಾವುಗಳು ಸಂಭವಿಸಿದಾಗ ಇದೇ ಹೋಟೆಲ್‌ನಲ್ಲಿ ರಷ್ಯಾ ಇಂಧನ ಸಚಿವ ಸೆರ್ಗಿ ಅವರು ಥಾಯ್ಲೆಂಡ್‌ ಸರ್ಕಾರದ ಜೊತೆ ಸಭೆ ನಡೆಸುತ್ತಿದ್ದರು. ಸಾವುಗಳ ಸುದ್ದಿ ಹೊರಬಿದ್ದ ತಕ್ಷಣವೇ ಸಭೆಯನ್ನು ಮೊಟಕುಗೊಳಿಸಲಾಗಿತ್ತು.

ಕಳೆದ ವರ್ಷ ಥಾಯ್ಲೆಂಡ್‌ನಲ್ಲಿ ಸರಣಿ ಕೊಲೆಗಾರ್ತಿಯೊಬ್ಬಳು ಹಣಕಾಸಿನ ವಿಚಾರಕ್ಕಾಗಿ ಸೈನೈಡ್ ನೀಡಿ 13 ಜನರನ್ನು ಕೊಂದಿದ್ದು ಭಾರಿ ಸಂಚಲನ ಉಂಟು ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries