ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಮುಂಗಾರು ಹಂಗಾಮಿನಡಿ ಇಲ್ಲಿಯವರೆಗೆ ದೇಶದಾದ್ಯಂತ 166.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಒಟ್ಟಾರೆ ಶೇ 7ರಷ್ಟು ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಭತ್ತವು ಮುಂಗಾರು ಋತುವಿನ ಪ್ರಮುಖ ಬೆಳೆಯಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 155.65 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿತ್ತು ಎಂದು ಹೇಳಿದೆ.
ಆಹಾರೇತರ ಬೆಳೆ:
ಈ ಬಾರಿ ಆಹಾರೇತರ ಬೆಳೆಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಅತಿಹೆಚ್ಚು ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ 150.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿತ್ತು. ಈ ವರ್ಷ 163.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಸೋಯಾಬಿನ್ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದ್ದು, ಒಟ್ಟು 119.04 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಭಾರತವು ವಿಶ್ವದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಶೇ 23ರಷ್ಟು ಉತ್ಪಾದನಾ ಪಾಲು ಹೊಂದಿದೆ. ಪ್ರಮುಖವಾಗಿ ಅಮೆರಿಕ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ ಹಾಗೂ ಯುಎಇಗೆ ಹತ್ತಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
ಆದರೆ, ಈ ಬಾರಿ ಹತ್ತಿ ಬಿತ್ತನೆ ಇಳಿಕೆಯಾಗಿದೆ. ಹಿಂದಿನ ವರ್ಷ 105.66 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 102.05 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಜುಲೈ 19ರ ವರೆಗೆ ದೇಶದಲ್ಲಿ ಮುಂಗಾರು ಹಂಗಾಮಿನಡಿ 704.04 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 680.36 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿತ್ತು.