ನವದೆಹಲಿ: ಸ್ವಾತಂತ್ರಪೂರ್ವದಿಂದ ಜಾರಿಯಲ್ಲಿದ್ದ ಐಪಿಸಿ ಮತ್ತು ಸಿಆರ್ಪಿಸಿ ಕಾನೂನುಗಳ ಬದಲಿಗೆ ಸೋಮವಾರದಿಂದ (ಜುಲೈ 1) ಮೂರು ಹೊಸ ಕಾನೂನುಗಳು ಜಾರಿಗೆ ಬಂದಿವೆ. ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ಹಳೆಯ ಐಪಿಸಿ-ಸಿಆರ್‌ಪಿಸಿಗೆ ಹೋಲಿಸಿದರೆ ಈ ಕಾನೂನಿನಲ್ಲಿ ಹಲವು ವ್ಯತ್ಯಾಸಗಳಿವೆ.
ಹೊಸ ಕಾನೂನುಗಳಿಂದ ತಂದ ಬದಲಾವಣೆಗಳ ಬಗ್ಗೆ ಗೃಹ ಸಚಿವ ಅಮಿತ್ ಷಾ ಪ್ರತಿಕ್ರಿಯಿಸಿದ್ದಾರೆ.
ಸ್ವಾತಂತ್ರ್ಯ ಬಂದು ಸುಮಾರು 77 ವರ್ಷಗಳ ನಂತರ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಸ್ವದೇಶಿಯಾಗುತ್ತಿದೆ. ದೇಶದ ಜನರಿಗೆ ಮೊದಲು ಅಭಿನಂದಿಸುತ್ತೇನೆ ಎಂದು ಹೇಳಿದ ಗೃಹಸಚಿವ ಅಮಿತ್ ಷಾ ಅವರು, ಬ್ರಿಟಿಷರು ಮಾಡಿದ ಕಾನೂನುಗಳು ಕೊನೆಗೊಂಡಿವೆ. ಈಗ ದೇಶದಲ್ಲಿ ಹೊಸ ಕಾನೂನುಗಳು ಜಾರಿಯಾಗುತ್ತಿದ್ದು, ಇದರಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡುವ ಬದಲು ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಹೊಸ ಕಾನೂನುಗಳು ಭಾರತೀಯ ಮೌಲ್ಯಗಳ ಮೇಲೆ ಕೆಲಸ ಮಾಡುತ್ತದೆ. ಈ ಕಾನೂನುಗಳನ್ನು 75 ವರ್ಷಗಳ ನಂತರ ಪರಿಗಣಿಸಲಾಗಿದೆ ಮತ್ತು ಇಂದಿನಿಂದ ಈ ಕಾನೂನುಗಳು ಜಾರಿಗೆ ಬಂದ ನಂತರ ವಸಾಹತುಶಾಹಿ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಂಸತ್ತಿನಲ್ಲಿ ಮಾಡಿದ ಕಾನೂನುಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಈಗ ಶಿಕ್ಷೆ ಬದಲಿಗೆ ನ್ಯಾಯ ಸಿಗಲಿದೆ. ವಿಳಂಬದ ಬದಲು ಜನರಿಗೆ ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯ ಸಿಗುತ್ತದೆ. ಮೊದಲು ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿತ್ತು ಆದರೆ ಈಗ ಸಂತ್ರಸ್ತರು ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ ಎಂದು ತಿಳಿಸಿದರು.
ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)2023, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (ಬಿಎನ್‌ಎಸ್‌ಎಸ್)2023 ಮತ್ತು ಭಾರತೀಯ ಸಾಕ್ಷ್ಯಿ ಕಾಯ್ದೆ (ಬಿಎಸ್‌ಎ)2023 ಅಡಿಯಲ್ಲಿ ಹೊಸ ಪ್ರಕರಣಗಳು ಮತ್ತು ಪ್ರಕ್ರಿಯೆಗಳನ್ನು ದಾಖಲಿಸಲಾಗುವುದು. ಈ ಮೂರು ಹೊಸ ಕಾನೂನುಗಳು ಬ್ರಿಟಿಷ್ ಕಾಲದ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ (IEA) ಅನ್ನು ಕ್ರಮವಾಗಿ ಬದಲಾಯಿಸಿವೆ.