ಮುಂಬೈ: ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ತಮ್ಮ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಟೌನ್ನಲ್ಲಿ ಕಿಂಗ್ ಎಂದು ಕರೆಸಿಕೊಳ್ಳುವ ಶಾರೂಖ್ ಹಲವರು ಪ್ರಶಸ್ತಿ ಪಡೆದಿದ್ದಾರೆ.
'ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024' ಅನ್ನು ಸ್ವಿಟ್ಜರ್ಲೆಂಡ್‌ನ ಲೊಕಾರ್ನೊದಲ್ಲಿ ಆಗಸ್ಟ್ 7 ರಂದು ಆಯೋಜಿಸಲಾಗುವುದು. ಈ ಚಲನಚಿತ್ರೋತ್ಸವ 2024 ಆಗಸ್ಟ್ 17ರಂದು ಮುಕ್ತಾಯಗೊಳ್ಳಲಿದೆ.
ಶಾರೂಖ್ ಖಾನ್ ಅವರಿಗೆ ಆಗಸ್ಟ್ 10ರಂದು ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಇದರೊಂದಿಗೆ ಶಾರೂಖ್ ಪ್ರತಿಷ್ಠಿತ ಪರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ-ಲೊಕಾರ್ನೊ ಟೂರಿಸಂ ಪ್ರಶಸ್ತಿಯನ್ನು ಪಿಯಾಝಾ ಗ್ರಾಂಡೆಯಲ್ಲಿ ಸ್ವೀಕರಿಸಲಿದ್ದಾರೆ. ಈ ಗೌರವದ ಪೂರಕವಾಗಿ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಶಾರೂಖ್ ಖಾನ್ ಅವರ ಸಿನಿಮಾ ದೇವದಾಸ್ (2002) ಪ್ರದರ್ಶನಗೊಳ್ಳಲಿದೆ. ಶಾರೂಖ್ ಖಾನ್ ಅವರನ್ನು ಗೌರವಿಸುವ ಕುರಿತು ಲೊಕಾರ್ನೊ ಸಂಘವು ಸಾಮಾಜಿಕ ಜಾಲತಾಣದ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಶಾರೂಖ್ ಖಾನ್ ಅವರಂತಹ ಜೀವಂತ ದಂತಕಥೆಯನ್ನು ಲೊಕಾರ್ನೊದಲ್ಲಿ ಸ್ವಾಗತಿಸುವುದು ಕನಸಿನ ಮಾತು! ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಯು ಅಭೂತಪೂರ್ವವಾಗಿದೆ. ಖಾನ್ ನನಗೆ, ಕಿರೀಟ ತೊಟ್ಟ ಪ್ರೇಕ್ಷಕರೊಂದಿಗೆ ಎಂದಿಗೂ ಸಂಪರ್ಕವನ್ನು ಕಳೆದುಕೊಳ್ಳದ ರಾಜ. ಈ ಕೆಚ್ಚೆದೆಯ ಮತ್ತು ಧೈರ್ಯಶಾಲಿ ಕಲಾವಿದ ಯಾವಾಗಲೂ ತನ್ನನ್ನು ತಾನೇ ಸವಾಲು ಮಾಡಿಕೊಳ್ಳಲು ಸಿದ್ಧನಿರುತ್ತಾನೆ. ಪ್ರಪಂಚದಾದ್ಯಂತದ ಅವನ ಅಭಿಮಾನಿಗಳು ಏನನ್ನೂ ನಿರೀಕ್ಷಿಸುತ್ತಾರೋ ಅದಕ್ಕೆ ತಕ್ಕಂತೆ ಇರುವ ನಿಜವಾದ 'ಜನರ ನಾಯಕ'. ಡೌನ್ ಟು ಅರ್ಥ್ ಶಾರೂಖ್ ಖಾನ್ ನಮ್ಮ ಕಾಲದ ದಂತಕಥೆ ಎಂದು ಲೊಕಾರ್ನೊ ಚಲನಚಿತ್ರೋತ್ಸವದ ನಿರ್ದೇಶಕ ಜಿಯೋನಾ ಎ. ನಝಾರೊ ಹೇಳಿದ್ದಾರೆ.
ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದ ಕೆಲವು ಪ್ರಸಿದ್ಧ ವ್ಯಕ್ತಿಗಳಲ್ಲಿ ತ್ಸೈಮಿಂಗ್-ಲಿಯಾಂಗ್, ಕ್ಲೌಡಿಯಾ ಕಾರ್ಡಿನೇಲ್, ಜಾನಿ ಟೊ, ಫ್ರಾನ್ಸೆಸ್ಕೊ ರೋಸಿ, ಹ್ಯಾರಿ ಬೆಲಾಫೊಂಟೆ ಮತ್ತು ಜೇನ್ ಬಿರ್ಕಿನ್ ಸೇರಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ಅಂತರದ ನಂತರ 2023ರಲ್ಲಿ ಶಾರೂಖ್ ಪಠಾಣ್, ಜವಾನ್ ಮತ್ತು ಡಂಕಿ ಮೂರು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪಠಾಣ್ ಮತ್ತು ಜವಾನ್ ಎರಡು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ನಿರ್ಮಿಸಿದವು. ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ.