ಥಾಣೆ: ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ನವೀ ಮುಂಬೈನ ಕಟ್ಟಡ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ಮಹಿಳೆಯರನ್ನು ರಕ್ಷಿಸಿ, ಒಬ್ಬ ಆಟೋ ಚಾಲಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ
ಆನ್‌ಲೈನ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಈ ತಂಡ, ಮಹಿಳೆಯರನ್ನು ವಿವಿಧ ಲಾಡ್ಜ್‌ಗಳಿಗೆ ಕಳುಹಿಸುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮಾನವ ಕಳ್ಳಸಾಗಣೆ ತಡೆ ಕೋಶದ ಇನ್‌ಸ್ಟೆಕ್ಟರ್ ಪೃಥ್ವಿರಾಜ್ ಘೋರ್ಪಡೆ ತಿಳಿಸಿದ್ದಾರೆ
ಗ್ರಾಹಕರ ಸೋಗಿನಲ್ಲಿ ತೆರಳಿದ್ದ ವ್ಯಕ್ತಿಯೊಬ್ಬನ ಸಹಾಯದಿಂದ ಆಟೊ ಚಾಲಕನೊಬ್ಬನನ್ನು ಬಂಧಿಸಲಾಗಿದೆ. ಆತನನ್ನು ಪ್ರದೀಪ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಮಹಿಳೆಯರನ್ನು ಲಾಡ್ಜ್‌ಗೆ ಕಳುಹಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಯಾದವ್ ವಿಚಾರಣೆ ಬಳಿಕ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಅವರು ನೀಡಿದ ಮಾಹಿತಿಯನ್ವಯ, ನೆರುಲ್ ಪ್ರದೇಶದ ಶಿರವಾನೆ ಎಂಬಲ್ಲಿನ ಕೊಠಡಿಯಿಂದ 8 ಮಂದಿ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಸ್ಥಳದಿಂದ ವಿಷ್ಣು ಅಲಿಯಾಸ್ ವಿಕಾಸ್ ಕುಮಾರ್ ಜಂಕಿ ಯಾದವ್ ಹಾಗೂ ಇಂದ್ರಜಿತ್ ಇಂದ್ರದೇವ್ ಪ್ರಸಾದ್ (63) ಎಂಬಿಬ್ಬರನ್ನೂ ಬಂಧಿಸಲಾಗಿದೆ. ತುರ್ಬೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ದೂರು ದಾಖಲಾಗಿದೆ.