ವಯನಾಡು: ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ 93 ಜನರ ಮೃತಪಟ್ಟಿದ್ದು, ಸುಮಾರು 128 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಇಲ್ಲಿಯವರೆಗೆ 34 ಮೃತದೇಹಗಳನ್ನು ಗುರುತಿಸಿದ್ದು, 18 ಮೃತದೇಹಗಳನ್ನು ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದರು.
ಪ್ರೀತಿ ಪಾತ್ರರಿಗಾಗಿ ದುಃಖಿಸುವ, ತಮ್ಮವರನ್ನು ಕಳೆದುಕೊಂಡು ಸಂಬಂಧಿಕರೊಂದಿಗೆ ದೂರವಾಣಿ ಕರೆಗಳಲ್ಲಿ ವಿಷಯ ಹಂಚಿಕೊಂಡು ಗೋಳಾಡುವ ದೃಶ್ಯಗಳು ಮನಕಲಕುವಂತಿದೆ.
ರಾತ್ರಿ ಸುಖ ನಿದ್ದೆಯಲ್ಲಿ ಮಲಗಿದ್ದ ಜನರು, ಮಕ್ಕಳು ಈಗ ಜೀವ ಕಳೆದುಕೊಂಡು ಮಣ್ಣಿನಡಿಯಾಗಿದ್ದಾರೆ. ತೀವ್ರವಾದ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ. ಭೂಕುಸಿತ ಸಂಭವಿಸಿದ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. ಜಿಲ್ಲೆಯಾದ್ಯಂತ 45ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈವರೆಗೆ 30 ಸಾವಿರಕ್ಕೂ ಹೆಚ್ಚು ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ನಸುಕಿನ 2 ಗಂಟೆ ವೇಳೆಗೆ ಮೊದಲ ಭೂಕುಸಿತ ಸಂಭವಿಸಿದೆ, ಬಳಿಕ ಬೆಳಗಿನ ಜಾವ 4.10ಕ್ಕೆ ಮತ್ತೆ ಭೂಕುಸಿತ ಸಂಭವಿಸಿದ್ದು, ಮೆಪ್ಪಾಡಿ, ಮುಂಡಕ್ಕ್ಕೈ ಮತ್ತು ಚೂರಲ್‌ಮಾಲಾ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಮಲಗಿದ್ದ ವೇಳೆ ಭೂಕುಸಿತ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯದಾಯಿತು. ಪರಿಣಾಮ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ವೆಲ್ಲಾರಿಮಾಲಾ ಪ್ರದೇಶದಲ್ಲಿ ಶಾಲೆಯೊಂದು ಸಂಪೂರ್ಣವಾಗಿ ಮಣ್ಣಿನಡಿಯಾಗಿದ್ದು, ಇರುವಝಿಂಜಿಪುಳ ನದಿ ಎರಡು ಭಾಗಗಳಾಗಿ ಹರಿಯುತ್ತಿದೆ.
ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರತಿಕೂಲ ಹವಾಮಾನ ಸ್ಥಿತಿ ಮುಂದುವರಿದಿದೆ. ಆದರೂ ಸಿಬ್ಬಂದಿ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಸಿಎಂ ವಯನಾಡಿನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.