ನವದೆಹಲಿ: 'ಸೋದರಿಯನ್ನು 'ಅದಿ' ಎಂದು ಕರೆದ ಮಾತ್ರಕ್ಕೆ ತಾನು ತಯಾರಿಸುವ ಸಿದ್ಧ ಉಡುಪುಗಳಿಗೆ 'ಅಡಿಡಾಸ್' ಹೆಸರನ್ನು ಇಡುವಂತಿಲ್ಲ' ಎಂದು ದೆಹಲಿ ಹೈಕೋರ್ಟ್ ಬಟ್ಟೆ ತಯಾರಿಕ ಉದ್ಯಮಿಗೆ ನಿರ್ದೇಶಿಸಿದೆ.
ಕೇಶವ ಎಚ್ . ತುಲಸಿಯಾನಿ ಎಂಬುವವರು ತಾವು ಉತ್ಪಾದಿಸುವ ಸಿದ್ಧ ಉಡುಪುಗಳ ಮಿಲ್‌ಗೆ ADIDAS ಎಂದು ಹೆಸರಿಟ್ಟಿರುವ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.
'ನನಗೆ ಬಾಲ್ಯದಿಂದಲೂ ನನ್ನ ಅಕ್ಕ ಎಂದರೆ ಹೆಚ್ಚು ಪ್ರೀತಿ. ಸಿಂಧಿ ಕುಟುಂಬದಲ್ಲಿ ಅಕ್ಕನನ್ನು 'ಅದಿ' ಎಂದೇ ಕರೆಯಲಾಗುತ್ತದೆ. ಹೀಗಾಗಿ ನಾನು ಅವರ ದಾಸ ಎಂಬಂತೆ, ADIDAS ಎಂದು ಕಂಪನಿಗೆ ಹೆಸರಿಟ್ಟಿದ್ದೇನೆ' ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ತುಲಸಿಯಾನಿ ಅವರು ಅದಿದಾಸ್ ವೀವಿಂಗ್ ಮಿಲ್, ಅದಿದಾಸ್ ಟೆಕ್ಸ್‌ಟೈಲ್ಸ್ ಹಾಗೂ ಅದಿದಾಸ್ ಮರ್ಚಂಡೈಸ್‌ನ ನಿರ್ದೇಶಕರಾಗಿದ್ದಾರೆ.
ಆದರೆ ಈ ವಾದವನ್ನು ಪುಷ್ಟೀಕರಿಸುವ ಸಾಕ್ಷ್ಯಗಳನ್ನು ಪ್ರತಿವಾದಿ ನ್ಯಾಯಾಲಯಕ್ಕೆ ಮಂಡಿಸಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅಡಿಡಾಸ್ ಹೆಸರು ಬದಲಿಸುವಂತೆ ನಿರ್ದೇಶಿಸಿತು.
ನ್ಯಾ. ಸಂಜೀವ್ ನರೂಲಾ ಅವರು ಆದೇಶ ಪ್ರಕಟಿಸಿ, 'ಅಡಿಡಾಸ್ ಎಂಬ ಉತ್ಪನ್ನವು ಸಾಕಷ್ಟು ಜನಪ್ರಿಯತೆ ಹೊಂದಿದೆ. ಹೀಗೆ ಬೇರೊಬ್ಬರು ಅದೇ ಹೆಸರನ್ನು ಇಟ್ಟರೆ, ಮೂಲ ಉತ್ಪನ್ನದ ಪ್ರತಿಷ್ಠೆಗೆ ಧಕ್ಕೆ ಬರಲಿದೆ. ಹೀಗಾಗಿ ಅಡಿಡಾಸ್ ಹೆಸರನ್ನು ಅನಧಿಕೃತವಾಗಿ ಬಳಸುವುದನ್ನು ಈ ನ್ಯಾಯಾಲಯ ಒಪ್ಪುವುದಿಲ್ಲ' ಎಂದು ಪ್ರಕರಣ ಇತ್ಯರ್ಥಪಡಿಸಿದರು.
ಇದರೊಂದಿಗೆ ಅಡಿಡಾಸ್ ಕಂಪನಿಗೆ ಆಗಿರುವ ಹಾನಿಗೆ ₹3 ಲಕ್ಷ ಪರಿಹಾರ ಹಾಗು ಪಿರ್ಯಾದಿಯ ದಾವೆ ವೆಚ್ಚವಾಗಿ ₹11.22 ಲಕ್ಷ ನೀಡುವಂತೆ ತುಲಸಿಯಾನಿಗೆ ಹೈಕೋರ್ಟ್ ಆದೇಶಿಸಿದೆ.