ನವದೆಹಲಿ: ಜಿಂಬಾಬ್ಬೆ ವಿರುದ್ಧ ಟಿ20 ಕ್ರಿಕೆಟ್ ಸರಣಿಗೆ ಅನುಭವಿ ಆಟಗಾರರಿಲ್ಲದ ಭಾರತ ತಂಡವನ್ನು ಕಳುಹಿಸಿದ್ದಕ್ಕಾಗಿ ಬಿಸಿಸಿಐ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ.
ತರೂರ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, 'ನಮ್ಮ ಟೀಮ್ ಇಂಡಿಯಾ ಸರಿಯಾಗಿ ಆಡಲಿಲ್ಲ. ಹಾಗಾಗಿ ಸೋಲು ಅನುಭವಿಸಿದೆ. ಆದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಮೇಲಿನ ದ್ವೇಷದಿಂದಾಗಿ ಕಾಂಗ್ರೆಸ್ ಭಾರತ ತಂಡದ ಸೋಲನ್ನು ಸಂಭ್ರಮಿಸುವುದನ್ನು ನೋಡುವುದು ಅಸಹ್ಯಕರವಾಗಿದೆ' ಎಂದು ಹೇಳಿದ್ದಾರೆ.
ಬಳಿಕ ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್ ಕುರಿತು ಸ್ಪಷ್ಟನೆ ನೀಡಿರುವ ತರೂರ್, 'ಒಂದು ತಂಡವನ್ನು ಭಾರತ ಎಂದು ಕರೆದರೆ ಅದು ಲೇಬಲ್‌ಗೆ ಅರ್ಹವಾಗಿರಬೇಕು. ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಪಂತ್, ಹಾರ್ದಿಕ್, ಕುಲದೀಪ್, ಸಿರಾಜ್, ಬುಮ್ರಾ ಮತ್ತು ಅರ್ಷದೀಪ್, ಸಂಜು, ಜೈಸ್ವಾಲ್, ಚಾಹಲ್, ದುಬೆ ಆಡುತ್ತಿಲ್ಲ. ಉತ್ತಮ ತಂಡವನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ಎಡವಿದೆ. ಜತೆಗೆ, ನಮ್ಮ ಆಟಗಾರರು ಸ್ವಾಭಿಮಾನವನ್ನು ತೋರಿಸದ ಸೋತಿರುವುದಕ್ಕೆ ಬೇಸರವೆನಿಸಿದೆ' ಎಂದು ಹೇಳಿಕೊಂಡಿದ್ದಾರೆ.
ಶನಿವಾರ ನಡೆದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತ್ತು. 116 ರನ್ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು 102 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಜಿಂಬಾಬ್ವೆಯ ನಾಯಕ, ಸ್ಪಿನ್ನರ್ ಸಿಕಂದರ್ ರಝಾ (25ಕ್ಕೆ3) ಮತ್ತು ವೇಗಿ ತೆಂದೈ ಚತಾರಾ (16ಕ್ಕೆ3) ಯಶಸ್ವಿಯಾದರು.
ಇದರೊಂದಿಗೆ ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು. ಭಾರತ ತಂಡವು 2024ರಲ್ಲಿ ಟಿ20 ಮಾದರಿಯಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ. ಜಿಂಬಾಬ್ವೆ ಎದುರು ಎಂಟು ವರ್ಷಗಳಿಂದ ಇದ್ದ ಅಜೇಯ ದಾಖಲೆಯೂ ಇದರೊಂದಿಗೆ ಮುರಿದುಬಿತ್ತು.