ಅಹಮದಾಬಾದ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಹಾಗೆ ಮುಂದಿನ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಸೋಲಿಸಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
'ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಬಿಜೆಪಿಯವರು ನಮಗೆ ಸವಾಲೊಡ್ಡಿದರು. ನಮ್ಮ ಕಚೇರಿಯನ್ನು ಹಾನಿ ಮಾಡಿದ ಹಾಗೆ, ನಾವು ಅವರ ಸರ್ಕಾರವನ್ನು ಕಿತ್ತೊಗೆಯಲಿದ್ದೇವೆ. ಬರೆದಿಟ್ಟುಕೊಳ್ಳಿ, ಅಯೋಧ್ಯೆಯಲ್ಲಿ ಸೋಲಿಸಿದ ಹಾಗೆ, ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಮೋದಿಯನ್ನು ನಾವು ಸೋಲಿಸಲಿದ್ದೇವೆ. ಗುಜರಾತ್‌ನಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಹೊಸ ಆರಂಭ ಮಾಡಲಿದೆ' ಎಂದು ರಾಹುಲ್ ಹೇಳಿದ್ದಾರೆ.
ಲೋಸಕಭೆಯಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ನಂತರ, ಬಿಜೆಪಿಯ ಯುವ ಮೊರ್ಚಾ ಕಾರ್ಯಕರ್ತರು ಅಹಮದಾಬಾದ್‌ನಲ್ಲಿರುವ ಕಾಂಗ್ರೆಸ್ ಕಚೇರಿ 'ರಾಜೀವ್ ಗಾಂಧಿ' ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದನ್ನು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಘಟನೆಯಲ್ಲಿ ಉಭಯ ಪಕ್ಷದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದರು. ಸಹಾಯಕ ಕಮಿಷನರ್ ಸೇರಿ ಐವರು ಪೊಲೀಸರು ಗಾಯಗೊಂಡಿದ್ದರು.
'ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸ್ಥಳೀಯ ಯಾವೊಬ್ಬ ವ್ಯಕ್ತಿಯನ್ನು ಆಹ್ವಾನಿಸದಿರುವುದು ಅಲ್ಲಿನ ಜನರಿಗೆ ಕೋಪ ತರಿಸಿದೆ. ಅಯೋಧ್ಯೆಯಿಂದ ಸ್ಪರ್ಧೆ ಮಾಡಲು ನರೇಂದ್ರ ಮೋದಿ ಬಯಸಿದ್ದರು. ಆದರೆ ಅಲ್ಲಿ ಸ್ಪರ್ದೆ ಮಾಡಿದರೆ ಸೋಲುವುದಾಗಿ ಸಮೀಕ್ಷೆಗಳು ಹೇಳಿದ್ದವು. ಹೀಗಾಗಿ ಅಯೋಧ್ಯೆಯಲ್ಲಿ ಸ್ಪರ್ಧೆ ಮಾಡುವುದರಿಂದ ಮೋದಿ ಹಿಂದೆ ಸರಿದಿದ್ದರು' ಎಂದು ರಾಹುಲ್ ಹೇಳಿದ್ದಾರೆ.