ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳು 'ಅಂತ್ಯೋದಯ' ತತ್ವದಿಂದ ನಡೆಸಲ್ಪಡುತ್ತವೆ ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕರ ಕಲ್ಯಾಣಕ್ಕೆ ಬದ್ಧವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಚರ್ಚಿಸಿದರು. ಹಲವು ಕಲ್ಯಾಣ ಯೋಜನೆಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪುತ್ತಿದೆಯೇ ಎಂಬುದರ ಬಗ್ಗೆ ಗಮನಹರಿಸಲಾಯಿತು. ಸಮಾಜದ ವಿವಿಧ ವರ್ಗಗಳಿಗೆ ವಿಶೇಷವಾಗಿ ಬಡವರಿಗೆ ಸಹಾಯ ಮಾಡಲು ಬಿಜೆಪಿ ನೇತೃತ್ವದ ಸರ್ಕಾರಗಳ ಪ್ರಯತ್ನಗಳ ಕುರಿತು ಮೋದಿ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
'ನಮ್ಮ ಪಕ್ಷವು ಮತ್ತಷ್ಟು ಉತ್ತಮ ಆಡಳಿತ ನೀಡಲು ಹಾಗೂ ಜನರ ಆಶೋತ್ತರಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿದೆ' ಎಂದು ಮೋದಿ ಹೇಳಿದ್ದಾರೆ.
'ಮುಖ್ಯಮಂತ್ರಿ ಪರಿಷತ್' ಸಭೆಯನ್ನು ಬಿಜೆಪಿ ಆಯೋಜಿಸಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಣ ಸಮನ್ವಯ ಹಾಗೂ ಉತ್ತಮ ಆಡಳಿತ ಕಾರ್ಯಸೂಚಿಯ ಭಾಗವಾಗಿ ನಿಯಮಿತವಾಗಿ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯ ಫಲಿತಾಂಶ ಹಾಗೂ ಕೇಂದ್ರ ಬಜೆಟ್ ಬಳಿಕ ನಡೆದ ಬಿಜೆಪಿ ಸಿಎಂಗಳ ಮೊದಲ ಸಭೆ ಇದಾಗಿದೆ.