ನವದೆಹಲಿ: ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ಪೂರ್ಣ ಕಣ್ಗಾವಲಿಡಲು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಳ್ಳಲು ನಿರ್ಧರಿಸಿದೆ. ಈ ಮೂಲಕ 'ಆಧಾರ್' ಆಧರಿತ ಬೆರಳಚ್ಚು ದೃಢೀಕರಣ, ಮುಖ ಗುರುತಿಸುವಿಕೆ ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಅಳವಡಿಸಿಕೊಳ್ಳಲು ಯೋಜಿಸಿದೆ.
ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ಪ್ರತಿ ವರ್ಷ 14 ಪ್ರಮುಖ ಪರೀಕ್ಷೆಗಳು, ಸಂದರ್ಶನಗಳನ್ನು ಆಯೋಗವು ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಸುಮಾರು 12 ಲಕ್ಷ ಉದ್ಯೋಗಾಕಾಂಕ್ಷಿಗಳು ಆಯೋಗ ನಡೆಸುವ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.
ಪ್ರಸಕ್ತ ಸಾಲಿನ 'ನೀಟ್-ಯುಜಿ' ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಕೆಲ ಪರೀಕ್ಷಾ ಅಕ್ರಮಗಳ ಬಗ್ಗೆ ಆರೋಪಗಳು ವ್ಯಕ್ತವಾದ ಕಾರಣ ಕೇಂದ್ರ ಸರ್ಕಾರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮತ್ತು ಪರೀಕ್ಷಾ ವ್ಯವಸ್ಥೆಯ ಪ್ರಕ್ರಿಯೆಯ ಸುಧಾರಣೆಗೆ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಬೆನ್ನಲ್ಲೇ ಯುಪಿಎಸ್‌ಸಿ ಸಹ ಕೆಲ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಈ ಸಂಬಂಧ ಯುಪಿಎಸ್‌ಸಿ ಜೂನ್ 20ರಂದು ಟೆಂಡರ್ ಕರೆದಿದ್ದು, ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ.
ಟೆಂಡರ್‌ನಲ್ಲಿರುವ ಪ್ರಮುಖಾಂಶಗಳು:
* ಅಸಲಿ ಮತ್ತು ನಕಲಿ ಅಭ್ಯರ್ಥಿಗಳ ಪತ್ತೆಗೆ, ಮೋಸ, ವಂಚನೆ, ಅನ್ಯಾಯ, ಅಕ್ರಮ ವಿಧಾನಗಳನ್ನು ಬಳಸುವ ಅಭ್ಯರ್ಥಿಗಳನ್ನು ಗುರುತಿಸಲು ಪರೀಕ್ಷಾರ್ಥಿಗಳ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಬೇಕು. ಅದಕ್ಕೆ ಪೂರಕವಾಗಿ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು
* ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ವೇಳೆಯಲ್ಲಿ ನಮೂದಿಸಿರುವ ಮಾಹಿತಿ, ಭಾವಚಿತ್ರ ಸೇರಿದಂತೆ ವಿವರಗಳನ್ನು ಆಯ್ಕೆಯಾಗುವ ಸೇವಾ ಸಂಸ್ಥೆಗಳಿಗೆ ಯುಪಿಎಸ್‌ಸಿ ನೀಡಲಿದೆ. ಈ ಸಂಸ್ಥೆಗಳು ಆಧಾರ್ ಆಧರಿತ ಬೆರಳಚ್ಚು ದೃಢೀಕರಣ, ಮುಖ ಗುರುತಿಸುವಿಕೆ ವಿಧಾನಗಳನ್ನು ಬಳಸಿಕೊಂಡು ಅಭ್ಯರ್ಥಿಗಳ ನೈಜತನವನ್ನು ಪರೀಕ್ಷೆಯ ದಿನ ದೃಢೀಕರಿಸಬೇಕು
* ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಹೊಂದಿರುವ ಪ್ರವೇಶ ಪತ್ರಗಳಲ್ಲಿ ಇರುವ ಕ್ಯೂಆರ್ ಕೋಡ್ ಅನ್ನು ಪರೀಕ್ಷಾ ಕೇಂದ್ರಗಳಲ್ಲಿ 'ಸ್ಕ್ಯಾನ್' ಮಾಡಿ ಪರಿಶೀಲಿಸಬೇಕು. ಒಂದು ವೇಳೆ ಕ್ಯೂಆರ್ ಕೋಡ್ 'ಸ್ಕ್ಯಾನ್' ಸರಿಯಾಗಿ ಆಗದಿದ್ದರೆ, ಕೇಂದ್ರದ ಸಿಬ್ಬಂದಿ ಪ್ರವೇಶ ಪತ್ರವನ್ನು ಪರಿಶೀಲಿಸುತ್ತಾರೆ
* ಸುರಕ್ಷಿತ ವೆಬ್ ಸರ್ವರ್ ಮೂಲಕ ಎಲ್ಲ ಅಭ್ಯರ್ಥಿಗಳ ಹಾಜರಾತಿ ನಿರ್ವಹಿಸಬೇಕು. ಪ್ರತಿ ಕೇಂದ್ರದಲ್ಲಿ ಹಾಜರಾದ ಅಭ್ಯರ್ಥಿಯ ಬೆರಳಚ್ಚು ಮತ್ತು ಭಾವಚಿತ್ರವನ್ನು ಪರಿಶೀಲಿಸಲಾಗಿದೆಯೇ ಎಂಬುದನ್ನು ಸೇವಾದಾರರು ಖಚಿತಪಡಿಸಿಕೊಳ್ಳಬೇಕು
* ಪರೀಕ್ಷಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಪರೀಕ್ಷಾ ಕೆಂದ್ರಗಳಲ್ಲಿ ಅಭ್ಯರ್ಥಿಗಳು, ಸಿಬ್ಬಂದಿ ಮತ್ತು ಇತರ ವ್ಯಕ್ತಿಗಳ ವಿವಿಧ ಚಟುವಟಿಕೆಗಳ ಮೇಲೆ ಸಿಸಿಟಿವಿ ಕ್ಯಾಮೆರಾ ಅಥವಾ ವಿಡಿಯೊ ಕಣ್ಗಾವಲಿನ ನೇರ ಪ್ರಸಾರ ವ್ಯವಸ್ಥೆ ಮಾಡಬೇಕು
* ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕನಿಷ್ಠ 24 ಅಭ್ಯರ್ಥಿಗಳಿಗೆ ಒಂದು ಕ್ಯಾಮೆರಾ ಇರಬೇಕು. ಕೇಂದ್ರದ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ, ಪರೀಕ್ಷೆಗೂ ಮುನ್ನ ಸೂಕ್ಷ್ಮ ದಾಖಲೆಗಳನ್ನು ಸಂಗ್ರಹಿಸಿಡುವ ಕೊಠಡಿ ಮತ್ತು ಅವುಗಳನ್ನು ತೆರೆಯುವ ಕೊಠಡಿಗಳಲ್ಲಿ ಹಾಗೂ ಪರೀಕ್ಷೆ ನಂತರ ಸೂಕ್ಷ್ಮ ದಾಖಲೆಗಳನ್ನು ಕಟ್ಟುವ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿರಬೇಕು
* ಈ ಸೇವೆಗಳನ್ನು ಒದಗಿಸುವ ಸಂಸ್ಥೆಯು ಈ ಎಲ್ಲ ದಾಖಲೆಗಳನ್ನು ಒಂದು ವರ್ಷಗಳ ಕಾಲ ಅಥವಾ ಅಂತಿಮ ಫಲಿತಾಂಶ ಪ್ರಕಟವಾದ 30 ದಿನಗಳವರೆಗೆ ಸಂರಕ್ಷಿಸಿಡಬೇಕು.