ನವದೆಹಲಿ: ಕೇಂದ್ರ ಪ್ರವಾಹ ನಿರ್ವಹಣಾ ನಿಧಿ ಪಡೆಯಲು 'ಪ್ರವಾಹ ಪ್ರದೇಶ ವಲಯ' ಕಾಯ್ದೆಯನ್ನು ಎಲ್ಲ ರಾಜ್ಯಗಳು ಕಡ್ಡಾಯಗೊಳಿಸಬೇಕು ಎನ್ನುವ ಷರತ್ತು ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಜಲಶಕ್ತಿ ಸಚಿವಾಲಯವು ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಯೋಜನೆಗಳಡಿ (ಎಫ್‌ಎಂಬಿಎಪಿ) ಅನುದಾನವನ್ನು ಪಡೆದುಕೊಳ್ಳಲು ರಾಜ್ಯಗಳು 'ಪ್ರವಾಹ ವಲಯ ಕಾಯ್ದೆ'ಯನ್ನು ಅತ್ಯಗತ್ಯವಾಗಿ ಜಾರಿಗೆ ತರುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವವನ್ನು ಇರಿಸಿದೆ.
ಇತ್ತೀಚೆಗೆ, ಕೇಂದ್ರ ಜಲ ಆಯೋಗವು ಮಾದರಿ ಮಸೂದೆನ್ನು ರೂಪಿಸಿದೆ. ಸಚಿವಾಲಯವು ರಾಜ್ಯಗಳೊಂದಿಗೆ ಮತ್ತೊಂದು ಸುತ್ತಿನ ಸಮಾಲೋಚನೆಯನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಜಲ ಶಕ್ತಿ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಈ ಮಸೂದೆಯು ಪ್ರವಾಹ ವಲಯದ ಅಧಿಕಾರಿಗಳಿಗೆ, ಸಮೀಕ್ಷೆಗಳು, ಪ್ರವಾಹ ಪ್ರದೇಶಗಳ ವಿವರಣೆ, ಪ್ರವಾಹ ಪ್ರದೇಶಗಳ ವ್ಯಾಪ್ತಿಗಳ ಅಧಿಸೂಚನೆ, ಪರಿಹಾರ ಕಲ್ಪಿಸುವುದು, ಪ್ರವಾಹ ಪ್ರದೇಶ ಬಳಕೆಯ ಮೇಲಿನ ನಿರ್ಬಂಧಗಳು, ಅಡೆತಡೆಗಳನ್ನು ನಿವಾರಿಸುವ ಸಂಬಂಧ ಮಾರ್ಗಸೂಚಿಗಳನ್ನು ಒದಗಿಸಲಿದೆ.
ಈ ಸಮಗ್ರ ಮಾರ್ಗಸೂಚಿಗಳ ಹೊರತಾಗಿಯೂ ಅನೇಕ ರಾಜ್ಯಗಳು ಈ ಕಾಯ್ದೆ ಜಾರಿಯತ್ತ ಇನ್ನು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮಣಿಪುರ, ರಾಜಸ್ಥಾನ, ಉತ್ತರಾಖಂಡ ಮತ್ತು ಹಿಂದೆ ರಾಜ್ಯದ ಸ್ಥಾನಮಾನ ಹೊಂದಿದ್ದ ಜಮ್ಮುವಿನಂತಹ ನಾಲ್ಕು ರಾಜ್ಯಗಳು ಮಾತ್ರ ಈ ಕಾಯ್ದೆಯನ್ನು ಜಾರಿಗೆ ತಂದಿವೆ ಎಂದು ಅಧಿಕಾರಿ ಹೇಳಿದರು.
ಜಲಶಕ್ತಿ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂವಹನ ನಡೆಸುತ್ತಿದೆ. ಪ್ರವಾಹ ಬಯಲು ವಲಯ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಲು ಮತ್ತು ಪ್ರವಾಹ ವಲಯಗಳನ್ನು ಗುರುತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪ್ರವಾಹ ನಿರ್ವಹಣೆ ಸೇರಿ ನೀರಿನ ನಿರ್ವಹಣೆಯು ರಾಜ್ಯದ ವಿಷಯ. ಹೀಗಾಗಿ, 2022ರ ಮೇ ತಿಂಗಳಲ್ಲಿ ಕೇಂದ್ರ ಜಲ ಶಕ್ತಿ ಸಚಿವಾಲಯವು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸೂಕ್ತ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿತ್ತು. 2023ರ ಜನವರಿಯಲ್ಲಿ ನಡೆದ ಸಭೆಯಲ್ಲಿ, ಸಮಗ್ರ ಪ್ರವಾಹ ನಿರ್ವಹಣೆ ಮತ್ತು ಪ್ರವಾಹ ಹಾನಿ ತಗ್ಗಿಸಲು ಪ್ರವಾಹ ವಲಯದ ಪ್ರಾಮುಖ್ಯತೆಯನ್ನು ಸಚಿವಾಲಯದ ಕಾರ್ಯದರ್ಶಿಯವರು ಒತ್ತಿ ಹೇಳಿದ್ದರು' ಎಂದೂ ಅಧಿಕಾರಿ ತಿಳಿಸಿದ್ದಾರೆ.
'ಹಣ ಬೇಕೆಂದರೆ ಕಾಯ್ದೆ ಜಾರಿಗೊಳಿಸಿ'
'ನಾವು ಮುಂದಿನ ಹಂತದಲ್ಲಿ ಎಫ್‌ಎಂಬಿಎಪಿಗೆ ಕ್ಯಾಬಿನೆಟ್ ಒಪ್ಪಿಗೆ ಪಡೆಯಲಿದ್ದೇವೆ. ಇನ್ನು ಮುಂದೆ ಯಾವುದೇ ರಾಜ್ಯವು ಎಫ್‌ಎಂಬಿಎಪಿ ಅಡಿಯಲ್ಲಿ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಈ ಷರತ್ತು ಅನ್ವಯಿಸಲಿದೆ. ರಾಜ್ಯವು ಪ್ರವಾಹ ವಲಯ ಕಾಯ್ದೆ ಜಾರಿಗೊಳಿಸಿರಬೇಕು. ಈ ಕಾಯ್ದೆಯನ್ನು ಜಾರಿಗೊಳಿಸದಿದ್ದರೆ ಕೇಂದ್ರದಿಂದ ಹಣ ಸಿಗುವುದಿಲ್ಲ' ಎಂದು ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.
ಆದರೆ, ಬಹುತೇಕ ಎಲ್ಲ ರಾಜ್ಯಗಳು ಕಾಯ್ದೆ ಜಾರಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಅವೆಲ್ಲವೂ ಒಂದೇ ರೀತಿಯದ್ದಾಗಿವೆ.
ರಾಜ್ಯಗಳು ವ್ಯಕ್ತಪಡಿಸಿರುವ ಸಮಸ್ಯೆಗಳು ಇಂತಿವೆ:
ಈಗಾಗಲೇ ಪ್ರವಾಹ ಪ್ರದೇಶಗಳನ್ನು ಅತಿಕ್ರಮಿಸಿರುವ ಜನರನ್ನು ಸ್ಥಳಾಂತರಿಸಲು ಸಮಸ್ಯೆ ಇದೆ. ಪರ್ಯಾಯ ವಸತಿ ಪ್ರದೇಶದ ಕೊರತೆಯೂ ಇದೆ.
ಪ್ರವಾಹ ಪೀಡಿತ ಮೌಲ್ಯಮಾಪನ ಅಧ್ಯಯನಗಳಿಗೆ ಹೆಚ್ಚಿನ ರೆಸಲ್ಯೂಶನ್ ಡಿಜಿಟಲ್ ಎಲಿವೇಶನ್ ಮಾಡೆಲ್ (ಡಿಇಎಂ) ಲಭ್ಯತೆ ಮತ್ತು ಪ್ರವಾಹ ಬಯಲಿನ ಸರಿಯಾದ ವ್ಯಾಖ್ಯಾನದ ಬಗ್ಗೆ ಸ್ಪಷ್ಟತೆಯ ಕೊರತೆಯೂ ಇದೆ.