ನವದೆಹಲಿ: ಕೋಚಿಂಗ್ ಸೆಂಟರ್‌ಗಳನ್ನು ನಡೆಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳಿದ್ದು, ಅವುಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.
ನವದೆಹಲಿಯ ಕೋಚಿಂಗ್ ಸೆಂಟರ್‌ನ ನೆಲಮಹಡಿಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ನಡೆದ ಕಿರು ಅವಧಿಯ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಈ ವಿಷಯದಲ್ಲಿ ರಾಜಕೀಯ ಕೆಸರೆರಚಾಟ ನಡೆಸುವುದು ಸರಿಯಲ್ಲ. ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದು, ಯಾರಾದರೂ ಜವಾಬ್ದಾರಿ ವಹಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು' ಎಂದು ಸಲಹೆ ನೀಡಿದರು.
'ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯಗಳು ಸಮಾನ ರೀತಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಕೋಚಿಂಗ್ ಸೆಂಟರ್‌ಗಳಿಗೂ ಜವಾಬ್ದಾರಿಗಳಿವೆ' ಎಂಬುದನ್ನು ಒತ್ತಿ ಹೇಳಿದರು.
'ಕೇಂದ್ರ ಸರ್ಕಾರವು 2017, 2019, 2020 ಮತ್ತು 2024 ರಲ್ಲಿ ಕೋಚಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದ ಸಲಹೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದೆ. ಕೋಚಿಂಗ್ ಸೆಂಟರ್‌ಗಳ ನೋಂದಣಿ ಮತ್ತು ಅದಕ್ಕೆ ಇರಬೇಕಾದ ಕನಿಷ್ಠ ಮಾನದಂಡಗಳು, ವಿದ್ಯಾರ್ಥಿಗಳ ಸುರಕ್ಷತೆಗೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು, ನಿರಂತರ ಮೇಲ್ವಿಚಾರಣೆ ಮತ್ತು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದು ಸೇರಿದಂತೆ ಹಲವು ಸಲಹೆಗಳನ್ನು ಅದು ಒಳಗೊಂಡಿದೆ' ಎಂದು ಮಾಹಿತಿ ನೀಡಿದರು.
ಗೋವಾ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಣಿಪುರ ಒಳಗೊಂಡಂತೆ ಕೆಲವು ರಾಜ್ಯಗಳು ಕೋಚಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ನಿಯಮಗಳನ್ನು ರೂಪಿಸಿವೆ.
'ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ರಾಜ್ಯಗಳಿಗೆ ಮಾರ್ಗಸೂಚಿಯನ್ನು ಕಳುಹಿಸಿದೆ. ಅದು ಸಾರ್ವಜನಿಕವಾಗಿ ಲಭ್ಯವಿದೆ. ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಪಾಲಿಸಿದ್ದರೆ, ಈ ದುರದೃಷ್ಟಕರ ಘಟನೆ ಸಂಭವಿಸುತ್ತಿರಲಿಲ್ಲ' ಎಂದ ಪ್ರಧಾನ್, 'ನಿಯಮಗಳನ್ನು ಜಾರಿಗೊಳಿಸುವುದು ರಾಜ್ಯಗಳ ಕರ್ತವ್ಯ' ಎಂದು ಪ್ರತಿಪಾದಿಸಿದರು.
ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಚರ್ಚೆಗೆ ಸರ್ಕಾರ ಸಿದ್ಧವಿದೆ. ಇದರಲ್ಲಿ ನಮಗೆ ಮುಚ್ಚಿಡುವಂತಹದ್ದು ಏನೂ ಇಲ್ಲತನಿಖೆಗೆ ಸಂಸದರ ಆಗ್ರಹ
ಕೋಚಿಂಗ್ ಸೆಂಟರ್ ದುರಂತ ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಲೋಕಸಭಾ ಸದಸ್ಯರು ಸೋಮವಾರ ಪಕ್ಷಭೇದ ಮರೆತು ಒತ್ತಾಯಿಸಿದರು. ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರದ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಬಿಜೆಪಿ ನಾಯಕಿ ನವದೆಹಲಿ ಲೋಕಸಭಾ ಕ್ಷೇತ್ರದ ಸಂಸದೆ ಬಾನ್ಸುರಿ ಸ್ವರಾಜ್ ಆರೋಪಿಸಿದರು. 'ಎಎಪಿಯ ಕ್ರಿಮಿನಲ್ ನಿರ್ಲಕ್ಷ್ಯದಿಂದ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳಬೇಕಾಯಿತು. ಘಟನೆಯ ಕುರಿತು ತನಿಖೆಗೆ ಗೃಹ ಸಚಿವಾಲಯದಡಿ ತನಿಖಾ ಸಮಿತಿ ರಚಿಸಬೇಕು' ಎಂದು ಒತ್ತಾಯಿಸಿದರು. 'ದೆಹಲಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಗೂ ಸಮಿತಿ ರಚನೆಯಾಗಲಿ. ದೆಹಲಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಏಕೆ' ಎಂದು ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದರು. ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.