ಮುಂಬೈ: 'ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ತಮ್ಮ ಪಕ್ಷಕ್ಕೆ ಅಂಟಿಕೊಂಡಿದ್ದೇನೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಎಂದಿಗೂ ಸಾಬೀತಾಗಿಲ್ಲ' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹೇಳಿದ್ದಾರೆ.
ಈ ಕುರಿತು ವಿಡಿಯೊ ಸಂದೇಶದಲ್ಲಿ ಅಭಿವೃದ್ಧಿಗಾಗಿ ರಾಜ್ಯದ ಜನತೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
'ಜನರೇ ನನ್ನ ಏಕೈಕ ಪಕ್ಷ. ಜನರ ಕಲ್ಯಾಣವೇ ಮೊದಲ ಆದ್ಯತೆಯಾಗಿದೆ. ಜನರಿಗೆ ಹೇಗೆ ಪ್ರಯೋಜನ ಸಿಗಲಿದೆ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
'ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಸಾಬೀತುಗೊಂಡಿಲ್ಲ. ನನ್ನ ವಿರುದ್ಧ ಮಿಥ್ಯ ಆರೋಪ ಮಾಡುವವರನ್ನು ಕಡೆಗಣಿಸಿ. ಉತ್ತಮ ಕೆಲಸ ಮಾಡುವವರಿಗೆ ಮತ ಹಾಕಿ' ಎಂದು ಹೇಳಿದ್ದಾರೆ.
ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ, ಬಿಜೆಪಿ, ಹಾಗೂ ಏಕನಾಥ ಶಿಂದೆ ಅವರ ಶಿವಸೇನಾ ಪಕ್ಷಗಳನ್ನು ಒಳಗೊಂಡಿರುವ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟವು ಕಳಪೆ ಸಾಧನೆ ಮಾಡಿತ್ತು. ಇದರ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂಬ ಕುರಿತು ವರದಿಗಳು ಬಂದಿದ್ದವು.
ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ ಮಹಾಯುತಿ ಮೈತ್ರಿಕೂಟ 17ರಲ್ಲಷ್ಟೇ ಜಯಿಸಿತ್ತು. 2019ರಲ್ಲಿ 23 ಸ್ಥಾನಗಳಲ್ಲಿ ಜಯಿಸಿದ್ದ ಬಿಜೆಪಿಯ ಸಂಖ್ಯೆ 9ಕ್ಕೆ ಕುಸಿತ ಕಂಡಿತ್ತು. ಶಿವಸೇನಾಗೆ 9 ಹಾಗೂ ಎನ್‌ಸಿಪಿಗೆ 1 ಸ್ಥಾನ ಮಾತ್ರ ದೊರಕಿತ್ತು. ಮತ್ತೊಂದೆಡೆ ಕಾಂಗ್ರೆಸ್, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್‌ಪಿಸಿ (ಶರದ್ ಪವಾರ್ ಬಣ) ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟ 30ರಲ್ಲಿ ಗೆದ್ದಿತ್ತು.
2024ರ ಜುಲೈಯಲ್ಲಿ ಎನ್‌ಸಿಪಿ ಸ್ಥಾಪಕ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದ ಅಜಿತ್ ಪವಾರ್, ಬಿಜೆಪಿ, ಶಿವಸೇನಾದೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು. ಬಳಿಕ ತಮ್ಮ ಪಕ್ಷಕ್ಕೆ ಹೊಸ ಚಿಹ್ನೆ ಹಾಗೂ ಹೆಸರು ಪಡೆಯುವಲ್ಲಿ ಯಶಸ್ವಿಯಾಗಿದ್ದರು.