ರಾಂಚಿ: ಪಕ್ಷಾಂತರ ನಿಷೇಧ ಕಾಯ್ದೆಯಡಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿ ಜಾರ್ಖಂಡ್ ವಿಧಾನಸಭಾಧ್ಯಕ್ಷರು ಗುರುವಾರ ಆದೇಶ ಹೊರಡಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಲೊಬಿನ್ ಹೆಮ್‌ಬ್ರೋಮ್ ಹಾಗೂ ಕಾಂಗ್ರೆಸ್‌ನ ಜೈ ಪ್ರಕಾಶ್ ಭಾಯ್ ಪಟೇಲ್ ಅನರ್ಹಗೊಂಡ ಶಾಸಕರು.
ಈ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಎಂಎಂ ಹಾಗೂ ಬಿಜೆಪಿಯು ಸಭಾಧ್ಯಕ್ಷರನ್ನು ಕೋರಿದ್ದವು. ಅನರ್ಹ ಶಾಸಕರು ಸ್ವತಂತ್ರ ಅಭ್ಯರ್ಥಿಗಳಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಹೆಮ್‌ಬ್ರೋಮ್ ಅವರು ಜೆಎಂಎಂ ಅಧಿಕೃತ ಅಭ್ಯರ್ಥಿ ವಿಜಯ್ ಹನ್ಸ್‌ದಕ್ ವಿರುದ್ಧ ಸ್ಪರ್ಧಿಸಿದ್ದರು. ಪಟೇಲ್ ಅವರು ಕಾಂಗ್ರೆಸ್ ಸೇರಿ ಹಜಾರಿಬಾಗ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಹೆಮ್‌ಬ್ರೋಮ್ ಅವರನ್ನು ಜೆಎಂಎಂ ಈ ಮೊದಲು ಪಕ್ಷ ವಿರೋಧಿ ಚಟುವಟಿಕೆಯಡಿ ಉಚ್ಛಾಟಿಸಿತ್ತು. ತಮ್ಮ ಶಾಸಕತ್ವ ರದ್ದತಿ ಕುರಿತು ಪ್ರತಿಕ್ರಿಯಿಸಿರುವ ಅವರು, 'ಸಭಾಧ್ಯಕ್ಷರು ನಿಷ್ಪಕ್ಷಪಾತಿಯಾಗಿದ್ದರೂ, ಒತ್ತಡಕ್ಕೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ' ಎಂದಿದ್ದಾರೆ.
'ಈ ಹಿಂದೆ ಹಲವರು ಪಕ್ಷ ಬದಲಿಸಿದ್ದಾರೆ. ಅವರ ವಿರುದ್ಧದ ಪ್ರಕರಣಗಳು ಕಳೆದ 2 ವರ್ಷಗಳಿಂದ ಇತ್ಯರ್ಥವಾಗದೆ ಹಾಗೇ ಇದೆ. ಆದರೆ ನನಗೆ ಮಾತ್ರ ಮಧ್ಯಾಹ್ನ 3ಕ್ಕೆ ನೋಟಿಸ್ ಜಾರಿಗೊಳಿಸಿ, ಸಂಜೆ 4ಕ್ಕೆ ಆದೇಶ ಪ್ರಕಟಿಸಲಾಗಿದೆ' ಎಂದು ಆರೋಪಿಸಿದರು.