ಲೇಹ್: ಇಂಡೋ-ಚೀನಾ ಗಡಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ತಲಾ 1 ಕೆ.ಜಿ ತೂಕದ 108 ಚಿನ್ನದ ಗಟ್ಟಿಗಳನ್ನು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಲೇಹ್: ಇಂಡೋ-ಚೀನಾ ಗಡಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ತಲಾ 1 ಕೆ.ಜಿ ತೂಕದ 108 ಚಿನ್ನದ ಗಟ್ಟಿಗಳನ್ನು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಮಗ್ಲರ್‌ಗಳ ಬಳಿಯಿಂದ ಎರಡು ಮೊಬೈಲ್ ಪೋನ್, ಬೈನಾಕ್ಯುಲರ್, ಎರಡು ಚಾಕು ಮತ್ತು ಕೇಕ್, ಹಾಲು ಸೇರಿದಂತೆ ಚೀನಾದ ಹಲವು ಆಹಾರೋತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ.
ಇತಿಹಾಸದಲ್ಲೇ ಐಟಿಬಿಪಿ ಗಡಿಯಲ್ಲಿ ವಶಪಡಿಸಿಕೊಂಡ ಅತ್ಯಧಿಕ ಪ್ರಮಾಣ ಚಿನ್ನ ಇದಾಗಿದೆ. ಜಪ್ತಿ ಮಾಡಿದ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಈಶಾನ್ಯ ಲಡಾಖ್‌ನ ಚಂಗ್‌ತಂಗ್ ಉಪವಲಯದ ಚಿಸ್ಬುಲೆ, ನರ್ಬುಲಾ, ಝಂಗ್ಲೆ, ಝಕ್ಲಾ ಪ್ರದೇಶಗಳಲ್ಲಿ ಅಕ್ರಮ ಸಾಗಾಟಗಾರರ ಹಾವಳಿ ಹೆಚ್ಚಾಗಿರುವುದರಿಂದ ಈ ವಲಯದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಐಟಿಬಿಪಿಯ 21ನೇ ಬೆಟಾಲಿಯನ್ ತೀವ್ರ ಶೋಧ ಕೈಗೊಂಡಿತ್ತು.
ಎಲ್‌ಎಸಿಯಿಂದ 1 ಕಿ.ಮೀ ದೂರದ ಶ್ರೀರಾಪ್ಲೆ ಬಳಿ ಅಕ್ರಮ ವಸ್ತುಗಳ ಸಾಗಾಟದ ಬಗ್ಗೆ ಐಟಿಬಿಪಿಗೆ ಮಾಹಿತಿ ಸಿಕ್ಕಿತ್ತು. ಗಸ್ತು ಪಡೆಯ ನೇತೃತ್ವ ವಹಿಸಿರುವ ಡೆಪ್ಯುಟಿ ಕಮಾಂಡೆಂಟ್ ದೀಪಕ್ ಭಟ್, ಇಬ್ಬರು ವ್ಯಕ್ತಿಗಳು ಹೇಸರಗತ್ತೆ ಮೇಲೆ ಪ್ರಯಾಣಿಸುತ್ತಿರುವುದನ್ನು ಗುರುತಿಸಿದ್ದಾರೆ.
ಆರಂಭದಲ್ಲಿ ಅವರು ತಾವು ಔಷಧಿಯ ಸಸ್ಯಗಳ ಡೀಲರ್‌ಗಳೆಂದು ಹೇಳಿಕೊಂಡಿದ್ದರು. ಬಳಿಕ, ಶೋಧ ನಡೆಸಿದಾಗ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ.
ತಪ್ಪಿಸಿಕೊಳ್ಳಲು ಮುಂದಾದ ಅವರನ್ನು ಐಟಿಬಿಪಿ ಸೆರೆಹಿಡಿದಿದೆ. ಬಂಧಿತರನ್ನು ಸೆರಿಂಗ್ ಛಂಬಾ(40) ಮತ್ತು ಸ್ಟ್ಯಾಂಜಿನ್ ಡೊರ್ಗ್ಯಾಲ್ ಎಂದು ಗುರುತಿಸಲಾಗಿದೆ.
ವಶಪಡಿಸಿಕೊಂಡ ಚಿನ್ನಕ್ಕೆ ಸಂಬಂಧಿಸಿದ ಮತ್ತೊಬ್ಬನನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.