ನವದೆಹಲಿ: ಸಂಸತ್ ಆವರಣದಲ್ಲಿ ಮಾಧ್ಯಮಗಳಿಗೆ ಇರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದರು.
'ಪಂಜರದಲ್ಲಿ ಬಂಧಿತರಾಗಿರುವ ಮಾಧ್ಯಮಗಳಿಗೆ ಹೊರಬರಲು ಅವಕಾಶ ನೀಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ' ಎಂದು ಲೋಕಸಭೆಯಲ್ಲಿ ರಾಹುಲ್ ಹೇಳಿದರು.
ಸಂಸತ್ ಭವನದ ಪ್ರವೇಶ ಹಾಗೂ ನಿರ್ಗಮನ ದ್ವಾರದ ಬಳಿ ಸಂಸದರ ಹೇಳಿಕೆಗಳನ್ನು ಪಡೆದುಕೊಳ್ಳಲು ಅವಕಾಶ ಇತ್ತು. ಆದರೆ ಈಗ ಪತ್ರಕರ್ತರಿಗೆ ಪ್ರತ್ಯೇಕ ಕೋಣೆ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, 'ಇಂಥ ಸಂಗತಿಗಳನ್ನು ವೈಯಕ್ತಿಕವಾಗಿ ತಿಳಿಸಬೇಕು. ಸದನದಲ್ಲಿ ಅಲ್ಲ' ಎಂದರು.
ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್, ಕಾಂಗ್ರೆಸ್‌ನ ಕಾರ್ತಿ ಚಿದಂಬರಂ, ಶಿವಸೇನಾದ (ಯುಟಿಬಿ) ಪ್ರಿಯಾಂಕ ಚತುರ್ವೇದಿ ಕೂಡ ಈ ವಿಷಯದ ಬಗ್ಗೆ ಧ್ವನಿ ಎತ್ತಿದರು.
'ಇದು ಸೆನ್ಸಾರ್‌ಶಿಪ್. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ' ಎಂದು ಒಬ್ರಯಾನ್ ಹೇಳಿದರು.
ಆ ಬಳಿಕ ಸ್ಪೀಕರ್ ಅವರು ಪತ್ರಕರ್ತರನ್ನು ಭೇಟಿಯಾಗಿ, 'ನಿಮ್ಮ ಎಲ್ಲಾ ಕುಂದುಕೊರತೆಗಳನ್ನು ಬಗೆಹರಿಸಲಾಗುವುದು. ಕರ್ತವ್ಯ ನಿರ್ವಹಿಸಲು ಉತ್ತಮ ಸೌಲಭ್ಯ ಒದಗಿಸಲಾಗುವುದು' ಎಂದು ಮಾತುಕೊಟ್ಟರು.