ಅಂಕೋಲಾ :ಅಂಕೋಲಾ ತಾಲೂಕು ಶಿರೂರಿನಲ್ಲಿ ಗುಡ್ಡ ಜರಿದ ದುರಂತದಲ್ಲಿ ನಾಪತ್ತೆ ಯಾದವರಲ್ಲಿ ಇನ್ನೂ ಇಬ್ಬರ ಶವವನ್ನು ಗಂಗಾವಳಿ ನದಿಯಲ್ಲಿ ಗುರುವಾರ ಪತ್ತೆ ಮಾಡಲಾಗಿದೆ. ಇದರಿಂದ ಒಟ್ಟು 6 ಜನರ ಶವ ಪತ್ತೆಯಾದಂತಾಗಿದೆ. ನಾಪತ್ತೆಯಾದವರಲ್ಲಿ ಇನ್ನೂ ನಾಲ್ವರು ಪತ್ತೆಯಾಗಬೇಕಿದೆ.
ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಮತ್ತೆ ಗುಡ್ಡ ಕುಸಿತವಾಗಿದೆ. ಶಿರೂರು ಮತ್ತು ಶಿರಸಿ-ಕುಮಟಾ ಹೆದ್ದಾರಿಯ ರಾಗಿಹೊಸಳ್ಳಿಯಲ್ಲಿ ಮೂರು ದಿನದ ಹಿಂದೆ ಸಂಭವಿಸಿದ ದುರಂತದ ಅವಶೇಷಗಳನ್ನು ತೆರವುಗೊಳಿಸುತ್ತಿರುವವರ ಕಣ್ಣೆದುರಲ್ಲೇ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು, ಪರಿಸ್ಥಿತಿಯನ್ನು ಇನ್ನಿಷ್ಟು ಜಟಿಲಗೊಳಿಸಿದೆ. ಕುಮಟಾ-ಅಂಕೋಲಾ ಮತ್ತು ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಅವಶೇಷ ತೆರವುಗೊಳಿಸಿ ಸಂಚಾರ ಮರುಸ್ಥಾಪಿಸುವುದು ಗುರುವಾರ ಕೂಡ ಸಾಧ್ಯವಾಗಿಲ್ಲ. ಇದರಿಂದ ಬದಲಿ ಮಾರ್ಗಗಳ ಮೇಲೆ ಒತ್ತಡ ಹೆಚ್ಚಿದೆ.
ಪೂರ್ತಿ ಕುಟುಂಬ ಕಣ್ಮರೆ: ಶಿರೂರಿನಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಲಕ್ಷ್ಮಣ ನಾಯ್ಕ ಅವರ ಕುಟುಂಬದ ನಾಲ್ವರು ಸದಸ್ಯರಲ್ಲಿ ಮೂವರ ಶವಗಳು ಇದುವರೆಗೆ ಪತ್ತೆಯಾಗಿದ್ದವು. ಬಾಲಕಿ ಆವಂತಿಕಾ (5) ಶವ ಗುರುವಾರ ಪತ್ತೆಯಾಗಿದೆ. ಪೂರ್ತಿ ಕುಟುಂಬ ಸಾವಿಗೀಡಾಗಿದ್ದು, ತಾಂತ್ರಿಕವಾಗಿಯೂ ಖಚಿತವಾಗಿದ್ದು, ಇಡೀ ಜಿಲ್ಲೆ ಮರುಗುತ್ತಿದೆ. ಟ್ಯಾಂಕರ್ ಚಾಲಕ ತಮಿಳುನಾಡು ನಾಮಕಲ್ ಮೂಲದ ಮುರುಗನ್ ಪಿ.(56) ಮೃತದೇಹ ಸಹ ಸಿಕ್ಕಿದೆ.
ಲಕ್ಷ್ಮಣ ನಾಯ್ಕರ ಭಾವ ಕುಮಟಾ ಮೂಲದ ಜಗದೀಶ ನಾಯ್ಕ, ನದಿಯಾಚೆ ನೀರು ಅಪ್ಪಳಿಸಿ ಕೊಚ್ಚಿ ಹೋಗಿರುವ ಸಣ್ಣಿ ಗೌಡ ಎಂಬ ವೃದ್ಧೆ ಸೇರಿ ನಾಲ್ವರಿಗಾಗಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಯಾಂತ್ರಿಕ ಬೋಟ್ ಬಳಸಿ ನದಿಯಲ್ಲಿ ಶೋಧ ಮುಂದುವರಿಸಿವೆ.
ಮಣ್ಣಿನಡಿ 3 ಟ್ಯಾಂಕರ್: ಎಚ್ಪಿಸಿಎಲ್ನ 1, ಬಿಪಿಸಿಎಲ್ನ 2 ಸೇರಿ ಮೂರು ಟ್ಯಾಂಕರ್ಗಳು ಗುಡ್ಡದ ಅವಶೇಷಗಳ ಅಡಿಯಲ್ಲಿ ಇವೆ ಎಂಬುದನ್ನು ಸಂಬಂಧಪಟ್ಟ ಕಂಪನಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಲ್ಲ ಟ್ಯಾಂಕರ್ಗಳಲ್ಲಿ ಒಬ್ಬೊಬ್ಬರೇ ಚಾಲಕರಿದ್ದರಂತೆ. ಇಬ್ಬರು ಚಾಲಕರ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೊಬ್ಬನ ಪತ್ತೆಯಾಗಬೇಕಿದೆ. ಮೂರೂ ಟ್ಯಾಂಕರ್ ಚಾಲಕರು ತಮಿಳುನಾಡು ಮೂಲದವರಾಗಿದ್ದಾರೆ.
ಇಷ್ಟೇ ಅಲ್ಲದೆ, ಜೊಯಿಡಾದ ರಾಮನಗರದಿಂದ ಕೇರಳಕ್ಕೆ ತೆರಳುತ್ತಿದ್ದ ಕಟ್ಟಿಗೆ ತುಂಬಿದ ಒಂದು ಲಾರಿ ಹಾಗೂ ಅದರ ಚಾಲಕ ಅರ್ಜುನ (30)ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಲಾರಿಯ ಜಿಪಿಎಸ್ ಲೋಕೇಶನ್ ಶಿರೂರಿಗೆ ಕೊನೆಯಾಗಿರುವುದನ್ನು ಆಧರಿಸಿ ಚಾಲಕ ಅರ್ಜುನ ಅವರ ಸಂಬಂಧಿಕರು ಜಿಲ್ಲಾಡಳಿತವನ್ನು ಸಂರ್ಪಸಿದ್ದಾರೆ. ಐಆರ್ಬಿ ಕಂಪನಿ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಮಣ್ಣು ತೆರವು ಕಾರ್ಯವನ್ನು ನಿರಂತರವಾಗಿ ನಡೆಸಿದ್ದಾರೆ. ಇನ್ನೂ 60 ಮೀಟರ್ ಮಣ್ಣು ತೆಗೆಯಬೇಕಿದೆ.
ರೈಲು ಸಂಚಾರಕ್ಕೆ ಅಡಚಣೆ: ಶಿವಮೊಗ್ಗ ಜಿಲ್ಲಾದ್ಯಂತ ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ಹಲವಾರು ಮನೆಗಳು ಧರೆಗುರುಳಿವೆ. ಅರಸಾಳು ಬಳಿ ರೈಲ್ವೆ ಹಳಿ ಮೇಲೆ ಸಾಗುವಾನಿ ಮರ ಬಿದ್ದುದರಿಂದ ರೈಲು ಸಂಚಾರ ಎರಡು ತಾಸು ತಡವಾಯಿತು. ರೈಲ್ವೆ ವಿದ್ಯುತ್ ಸಂಪರ್ಕದ ತಂತಿಗಳು ತುಂಡಾಗಿ ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಅಡಚಣೆಯಾಗಿತ್ತು. ಸತತ ಎರಡು ತಾಸು ಮರ ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮೂರು ಕಡೆ ಕಾಳಜಿ ಕೇಂದ್ರ: ಶೃಂಗೇರಿ ಭಾಗದಲ್ಲಿ ವಿಪರೀತ ಮಳೆ ಬೀಳುತ್ತಿದ್ದು ತುಂಗಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಹಾಗಾಗಿ ಜಲಾಶಯದಿಂದ 72 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಹಾನಗರ ಪಾಲಿಕೆ ಈಗಾಗಲೇ ಸೀಗೆಹಟ್ಟಿ, ರಾಮಣ್ಣಶ್ರೇಷ್ಠಿ ಪಾರ್ಕ್ ಹಾಗೂ ಬಾಪೂಜಿನಗರ ಬಡಾವಣೆಯಲ್ಲಿ ಕಾಳಜಿ ಕೇಂದ್ರ ತೆರೆದಿದೆ.
ಟ್ಯಾಂಕರ್ ಅನಿಲ ವಾತಾವರಣಕ್ಕೆ: ಶಿರೂರು ದುರಂತದಲ್ಲಿ ನದಿಗೆ ಬಿದ್ದು ತೇಲಿಕೊಂಡು ಐದು ಕಿಮೀ ದೂರ ತಲುಪಿರುವ ಅಡುಗೆ ಅನಿಲದ ಟ್ಯಾಂಕರ್ ಇನ್ನೂ ಮುಂದಕ್ಕೆ ಹೋಗದಂತೆ ತಡೆಯಲಾಗಿದೆ. ಅನಿಲವನ್ನು ಇನ್ನೊಂದು ಟ್ಯಾಂಕರ್ಗೆ ವರ್ಗಾಯಿಸುವುದು ಅಸಾಧ್ಯ. ಹೀಗಾಗಿ ಅತ್ಯಂತ ನಿಯಂತ್ರಿತ ವಿಧಾನದಲ್ಲಿ ನಿಧಾನವಾಗಿ ಅನಿಲವನ್ನು ವಾತಾವರಣಕ್ಕೆ ಬಿಡುವ ಮೂಲಕ ಟ್ಯಾಂಕರ್ ಖಾಲಿ ಮಾಡಲು ಎಚ್ಪಿಸಿಎಲ್ ಮುಂದಾಗಿದೆ. ಕೋಸ್ಟ್ ಗಾರ್ಡ್ ಸಹಕಾರ ಪಡೆದು, ಎಚ್ಪಿಸಿಎಲ್ನ 30 ತಜ್ಞರುಳ್ಳ ತಂಡ ಕಾರ್ಯಾಚರಣೆ ಪ್ರಾರಂಭಿಸಿದೆ. ಸಮೀಪದ 35 ಮನೆಗಳ ಜನರನ್ನು ಖಾಲಿ ಮಾಡಿಸಲಾಗಿದ್ದು, ಸಮೀಪ ಯಾರೂ ಓಡಾಡದಂತೆ, ಮೊಬೈಲ್ ಬಳಸದಂತೆ ಡಂಗುರ ಸಾರಲಾಗುತ್ತಿದೆ.
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ- ಶಿರೂರು ನಡುವೆ ರಸ್ತೆ ಬದಿಯ ಗುಡ್ಡ ಕುಸಿದು ಸಂಭವಿಸಿರುವ ಘಟನೆ ಬಗ್ಗೆ ಸರ್ಕಾರ ಗಂಭೀರತೆ ತೋರಿಸಿಲ್ಲ. ಅಲ್ಲಿ ಮಣ್ಣು ತೆಗೆದಂತೆಲ್ಲ ಶವಗಳು ಸಿಗುತ್ತಿವೆ. ಆದ್ದರಿಂದ ಸರ್ಕಾರ ಕೂಡಲೆ ಅಲ್ಲಿಗೆ ನೋಡಲ್ ಅಧಿಕಾರಿ ನೇಮಕ ಮಾಡಬೇಕು ಎಂದು ಬಿಜೆಪಿ ಸದಸ್ಯರಾದ ಶಾಂತರಾಮಸಿದ್ದಿ ಮತ್ತು ಸಂಕನೂರ ಸರ್ಕಾರವನ್ನು ಮೇಲ್ಮನೆಯಲ್ಲಿ ಒತ್ತಾಯಿಸಿದರು.
ಅನಧಿಕೃತ ಮನೆಗಳಿಗಿಲ್ಲ ಪರಿಹಾರ!: ಶಿವಮೊಗ್ಗ: ರಾಜ್ಯದಲ್ಲಿ 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೊಳಗಾದ ಇಲ್ಲವೇ ನೆಲಕ್ಕುರುಳಿದ ಮನೆಗಳಿಗೆ ಪರಿಹಾರ ನೀಡಲು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದರು. ಆದರೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಅನಧಿಕೃತ ಮನೆಗಳಿಗೆ ಪರಿಹಾರ ನೀಡದಂತೆ ಆದೇಶ ಹೊರಡಿಸಿ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಿದೆ.ಮನೆಯಿದ್ದ ಜಾಗಕ್ಕೆ ಸರ್ಕಾರ ನೀಡಿದ ಹಕ್ಕುಪತ್ರ ಇಲ್ಲವೇ ಕಂದಾಯ ಕಟ್ಟಿದ ರಸೀದಿ ಇದ್ದರೆ ಮಾತ್ರ ಅದನ್ನು ಅಧಿಕೃತ ಮನೆ ಯೆಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಮನೆ ಕಳೆದುಕೊಂಡವರ ಪೈಕಿ 546 ಮಂದಿ ಈವರೆಗೂ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಕೆಲವರಿಗೆ ಮೊದಲ ಕಂತಿನ ಹಣವಷ್ಟೇ ಬಂದಿದೆ.
ಹೆಬ್ರಿ(ಉಡುಪಿ): ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ಕೃಷಿ ಕೂಲಿ ಕಾರ್ವಿುಕ, ತುಮಕೂರು ಮೂಲದ ಆನಂದ್(55) ಎಂಬುವರು ಗುರುವಾರ ಸಂಜೆ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲಸಕ್ಕೆಂದು ಕಾಲುಸಂಕವಿಲ್ಲದ ಹೊಳೆಯನ್ನು ಹಗ್ಗದ ಸಹಾಯದಿಂದ ದಾಟುವಾಗ ಹಗ್ಗ ತುಂಡಾಗಿ ಘಟನೆ ನಡೆದಿದೆ ಎನ್ನಲಾಗಿದೆ.
ತುಂಗಾ ತಟದಲ್ಲಿ ಪ್ರವಾಹ ಪರಿಸ್ಥಿತಿ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ ಇದರಿಂದ ಶೃಂಗೇರಿ, ಕಳಸ, ಮೂಡಿಗೆರೆ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಣವಾಗಿದೆ. ತುಂಗಾ ನದಿ ತಟ್ಟದಲ್ಲಿದ್ದ ಗ್ರಾಮಗಳ ತೋಟಗಳು ಜಲಾವೃತಗೊಂಡಿವೆ. ಇನ್ನು ಬಯಲು ಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಕೃಷಿಗೆ ಪೂರಕ ವಾತಾವರಣ ನಿರ್ವಣವಾಗಿದೆ. ಆದರೆ ಮಲೆನಾಡು ಭಾಗದಲ್ಲಿ ಮಾತ್ರ ಮಹಾಮಳೆ ನೆರೆಯನ್ನು ಸೃಷ್ಟಿಸಲಾರಂಭಿಸಿದೆ. ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ಒಳಹರಿವು ದಾಖಲಾಗಿದೆ.
ಕರಾವಳಿಯಲ್ಲಿ ವರುಣಾರ್ಭಟ: ದಕ್ಷಿಣ ಕನ್ನಡ, ಉಡುಪಿಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ನಾಲ್ಕು ದಿನಗಳ ಕಾಲ ರೆಡ್ ಅಲರ್ಟ್ ಘೊಷಿಸಲಾಗಿದೆ. ಉಪ್ಪಿನಂಗಡಿಯ ನೇತ್ರಾವತಿ ಹಾಗೂ ಕುಮಾರಧಾರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಬುಧವಾರ ರಾತ್ರಿಯಿಂದ ನಸುಕಿನ ಜಾವದವರೆಗೆ ನಿರಂತರ ಮಳೆಯಾಗಿದ್ದು, ಗುರುವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ ನದಿ ನೀರು ಅಪಾಯ ಮಟ್ಟ ಮೀರಿ ಹರಿದಿದೆ. ಭಾರಿ ಮಳೆಗೆ ಹೆದ್ದಾರಿ ಸಹಿತ ಪ್ರಮುಖ ರಸ್ತೆಗಳು ಕೆಟ್ಟು ಹೋಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಕಾಪು, ಬ್ರಹ್ಮಾವರ, ಉಡುಪಿ, ಬೈಂದೂರು ಹಾಗೂ ಕಾರ್ಕಳ ತಾಲೂಕಿನಲ್ಲಿ 33 ಮನೆ, 2 ಕೊಟ್ಟಿಗೆ ಹಾಗೂ ಇಬ್ಬರು ಕುಟುಂಬದ ಕೃಷಿ ತೋಟ ಭಾಗಶಃ ಹಾನಿಯಾಗಿದೆ. ಜುಲೈ 19ರಂದು ಉಡುಪಿ, ಕಾಸರಗೋಡು ಜಿಲ್ಲಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.