ಕುಂಬಳೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಬೌದ್ಧಿಕ ಬೆಳವಣಿಗೆಗೆ ಪತ್ರಿಕೆಗಳ ಓದು ಬಹಳ ಮುಖ್ಯವಾದದ್ದು. ಪತ್ರಿಕೆಯೊಂದರ ಪ್ರತಿಯೊಂದು ಪುಟಕ್ಕೂ ಅದರದ್ದೇ ಆದ ಮಹತ್ವವಿದೆ. ಪತ್ರಿಕೆಯ ಕುರಿತಾದ ಮೂಲಭೂತ ವಿಷಯಗಳನ್ನು ನಾವು ಯಾವತ್ತೂ ಅರಿತಿರಬೇಕು ಎಂದು ಜಿ.ಎಚ್.ಎಸ್ ಎಸ್ ಮೊಗ್ರಾಲ್ ಪುತ್ತೂರು ಶಾಲೆಯ ಮುಖ್ಯ ಶಿಕ್ಷಕಿ ಬೀನಾ ಸಿ ಟಿ ಅಭಿಪ್ರಾಯಪಟ್ಟರು.
ಮೊಗ್ರಾಲ್ ಪುತ್ತೂರು ಜಿ.ಎಚ್.ಎಸ್ ಎಸ್ ಶಾಲೆಯಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಕನ್ನಡ ಭಾಷಾ ಸಂಘ ಹಾಗೂ ಸಮಾಜವಿಜ್ಞಾನ ಸಂಘ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೆಯೊಂದರ ಸ್ವರೂಪ, ಪುಟ ವಿನ್ಯಾಸ ಕ್ರಮ, ಸುದ್ದಿಗಳ ಸ್ವರೂಪಗಳ ಕುರಿತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಅವರು ಒದಗಿಸಿದರು. ಮಕ್ಕಳು ತಯಾರಿಸಿದ ಕೈ ಬರಹ ಪತ್ರಿಕೆ ಹನಿ-ಧ್ವನಿ ಮಳೆಸಂಚಿಕೆಯನ್ನು ಈ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದರು.
ಅಧ್ಯಾಪಕರಾದ ರಾಘವ ಎಂ.ಎನ್, ಡಾ.ಸೌಮ್ಯಾ ಪಿ, ಅನುಷಾ, ಗಿರೀಶ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾಜವಿಜ್ಞಾನ ಸಂಘದ ಮಾರ್ಗದರ್ಶಕರಾದ ರಾಘವ ಎಂ.ಎನ್ ಶುಭಹಾರೈಸಿದರು. ಕನ್ನಡ ಭಾಷಾ ಸಂಘದ ಮಾರ್ಗದರ್ಶಕಿ ಡಾ.ಸೌಮ್ಯಾ ಪಿ ಸ್ವಾಗತಿಸಿ, ವಿದ್ಯಾರ್ಥಿ ಲಿತೇಶ್ ವಂದಿಸಿದರು.