ನವದೆಹಲಿ: ಭಾರತೀಯರನ್ನು ವಂಚಿಸಿ ಅವರನ್ನು ರಷ್ಯಾ ಸೇನೆಯಲ್ಲಿ ಸೇರಿಸುವ ಮತ್ತು ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ಕಳಿಸುವ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲು ರಷ್ಯಾ ಬದ್ಧವಾಗಿದೆ ಎಂದು ರಷ್ಯಾದ ರಾಯಭಾರಿ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಮಸ್ಯೆ ಕುರಿತು ರಷ್ಯಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾತುಕತೆ ನಡೆಸಿದ್ದರು. ಸುಳ್ಳು ಮಾಹಿತಿ ಮೇರೆಗೆ ರಷ್ಯಾ ಸೇನೆ ಸೇರಿರುವ ಭಾರತೀಯರ ಬಿಡುಗಡೆ ಕುರಿತ ವಿಷಯ ಮಾತುಕತೆಯ ಕೇಂದ್ರಬಿಂದುವಾಗಿತ್ತು.
ಭಾರತೀಯರನ್ನು ಶೀಘ್ರವೇ ಬಿಡುಗಡೆಗೊಳಿಸುವ ಕುರಿತು ರಷ್ಯಾ ಭರವಸೆ ನೀಡಿದೆ ಎಂದು ಮೋದಿ ಜೊತೆಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸಮಸ್ಯೆ ಪರಿಹರಿಸಲು ಭಾರತ ಮತ್ತು ರಷ್ಯಾ ಸಮನ್ವಯ ಸಾಧಿಸುತ್ತಿವೆ. ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿರುವ ಏಜೆಂಟರುಗಳು ಇರುವುದು ಭಾರತದಲ್ಲಿ. ಹೀಗಾಗಿ ಈ ಕುರಿತು ರಷ್ಯಾ, ಭಾರತ ಎರಡೂ ಕಡೆ ತನಿಖೆ ನಡೆಯಬೇಕು' ಎಂದು ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿ ಅಧಿಕಾರಿ ರೋಮನ್ ಬಬುಶ್ಕಿನ್ ಬುಧವಾರ ತಿಳಿಸಿದರು.
ಲಾಭದಾಯಕ ಉದ್ಯೋಗಗಳ ಮತ್ತು ಶಿಕ್ಷಣದ ಅವಕಾಶಗಳ ಆಮಿಷಕ್ಕೊಳಗಾಗಿ 30ರಿಂದ 40 ಭಾರತೀಯರು ಈಗ ರಷ್ಯಾದ ಸೈನ್ಯದಲ್ಲಿ ಹೋರಾಡುತ್ತಿದ್ದಾರೆ ಎಂದು ಭಾವಿಸಲಾಗಿದೆ. ಭಾರತ ಮೂಲದ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದೂ ಭಾರತ ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಈವರೆಗೆ 10 ಭಾರತೀಯರನ್ನು ರಷ್ಯಾದಿಂದ ಕರೆತರಲಾಗಿದ್ದು, ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದೆ.