ಉಪ್ಪಳ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ವತಿಯಿಂದ ವಾಚನಾ ಮಾಸಾಚರಣೆ ಕಾರ್ಯಕ್ರಮವು ಐಲ ಶ್ರೀ ಶಾರದಾ ಬೋವೀಸ್ ಎ.ಯು.ಪಿ.ಶಾಲೆ ಐಲದಲ್ಲಿ ನಡೆಸಲಾಯಿತು.
ಆ ಪ್ರಯುಕ್ತ ಶಾಲೆಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದ್ದು ವಿಜೇತರಾದ ಎಲ್.ಪಿ., ಯು.ಪಿ., ಹೈಸ್ಕೂಲ್ ವಿಭಾಗದ ಮಕ್ಕಳಿಗೆ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಐಲ ಶಾಲೆಯ ಪ್ರಬಂಧಕ ಆನಂದ ಕೆ. ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ ಚೆಕ್ಕೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಘಟನೆಯ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ. ಉಪಸ್ಥಿತರಿದ್ದರು. ಶಾಲಾ ಹಿರಿಯ ಶಿಕ್ಷಕಿ ಅಮಿತ, ಸಂಘಟನೆಯ ಅಧಿಕೃತ ವಕ್ತಾರ ಸುಕೇಶ್ ಎ, ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಬಿ. ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು.
ಮಂಜೇಶ್ವರ ಘಟಕದ ಕಾರ್ಯದರ್ಶಿ ಜೀವನ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಶ್ರೀರಾಮ ಕೆದುಕೊಡಿ ವಂದಿಸಿದರು. ಸದಸ್ಯೆ ಕವಿತಾ ಕಾರ್ಯಕ್ರಮ ನಿರೂಪಿಸಿದರು.