ತಿರುವನಂತಪುರ: ಅರಣ್ಯ ಇಲಾಖೆಯಲ್ಲಿನ ವಿವಿಧ ಬಾಕಿ ಮೊತ್ತಗಳ ಪಾವತಿ ಆರಂಭವಾಗಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ಘೋಷಿಸಿದ್ದಾರೆ.
ರಾಜ್ಯದಲ್ಲಿ ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅರಣ್ಯ ವೀಕ್ಷಕರು ಹಾಗೂ ಇತರೆ ನೌಕರರ ವೇತನ ಬಾಕಿಯನ್ನು ಕೂಡಲೇ ಪಾವತಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ವರ್ಷ ಮೇ 31ರವರೆಗೆ ಬಾಕಿ ಇರುವ ವೇತನ ಪಾವತಿಗೆ ಸರ್ಕಾರ 9.76 ಕೋಟಿ ರೂ. ಬಿಡುಗಡೆಮಾಡಿದೆ. ಈ ಮೊತ್ತವನ್ನು ಶೀಘ್ರ ನೌಕರರಿಗೆ ನೀಡಲಾಗುವುದು. ಮಾನವ-ವನ್ಯಜೀವಿ ಸಂಘರ್ಷದಿಂದ ಜೀವ ಮತ್ತು ಆಸ್ತಿ ನಾಶಕ್ಕೆ ಒಳಗಾದ ಜನರು ಮತ್ತು ಫಲಾನುಭವಿಗಳಿಗೆ ಪರಿಹಾರ ನೀಡಲು ಮೊತ್ತವನ್ನು ಕೂಡಾ ಮಂಜೂರು ಮಾಡಲಾಗಿದೆ. ಈ ನಿಟ್ಟಿನಲ್ಲಿ 3.21 ಕೋಟಿ ರೂ.ಬಿಡುಗಡೆಮಾಡಲಾಗಿದೆ.
ಅರಣ್ಯದಲ್ಲಿ ನೀರಿನ ಲಭ್ಯತೆ, ಕ್ಷಿಪ್ರ ಕಾರ್ಯಾಚರಣೆ ಪಡೆಗಳ ರಚನೆ, ಕಣ್ಗಾವಲು ವ್ಯವಸ್ಥೆ, ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವ ಕಾಡುಪ್ರಾಣಿಗಳ ನಿರ್ವಹಣೆ, ಸ್ವಯಂಪ್ರೇರಿತ ಪುನರ್ವಸತಿ ಯೋಜನೆ ಮುಂತಾದ ವಿವಿಧ ಉದ್ದೇಶಗಳಿಗಾಗಿ ಕೆಐಎಫ್‍ಬಿ ನಿಧಿಯಿಂದ 110 ಕೋಟಿ ರೂಪಾಯಿಗಳನ್ನು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕೆಐಎಫ್‍ಬಿ ಮೂಲಕ ಈಗಾಗಲೇ 100 ಕೋಟಿ ರೂ.ಗಳ ಜೊತೆಗೆ ಈಗ ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು 110 ಕೋಟಿ ರೂ.ಗಳನ್ನು ವಿನಿಯೋಗಿಸಲು ನಿರ್ಧರಿಸಲಾಗಿದೆ. ಮೀಸಲಿಟ್ಟ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ವನ್ಯಜೀವಿಗಳ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.