ತಿರುಪತಿ: ಖ್ಯಾತ ಪವಿತ್ರ ಯಾತ್ರಾ ತಾಣ ತಿರುಮಲದಲ್ಲಿ ಆಂಜನೇಯಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಮರ ಬಿದ್ದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರಪ್ರದೇಶದ ತಿರುಮಲ (tirumala) ಕ್ಷೇತ್ರದ ಜಪಾಲಿ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ ಹೋಗುತ್ತಿದ್ದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹಿಂಬದಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದಾಗ ಈ ದೃಶ್ಯವೂ ದಾಖಲಾಗಿದೆ. ಕೂಡಲೇ ವ್ಯಕ್ತಿ ಮೊಬೈಲ್ ಬಂದ್ ಮಾಡಿ ಮಹಿಳೆ ಕಡೆ ಓಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral video) ಆಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶರವಣನ್ ಎಂಬವರು ಹಂಚಿಕೊಂಡಿರುವ ವಿಡಿಯೋದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಮಹಿಳೆಯ ತಲೆಯ ಮೇಲೆ ಬೃಹತ್ ಗಾತ್ರದ ಮರದ ಕೊಂಬೆಯೊಂದು ಬಿದ್ದು ಕೂಡಲೇ ಮಹಿಳೆ ಪ್ರಜ್ಞೆ ತಪ್ಪಿ ನೆಲಕ್ಕುರುಳುತ್ತಿರುವುದನ್ನು ಕಾಣಬಹುದು.