ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ನೀಟ್-ಯುಜಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ತರಾಟೆ ತೆಗೆದುಕೊಂಡರು.
ವಾಸ್ತವವಾಗಿ, ವಿಚಾರಣೆ ವೇಳೆ ಹಿರಿಯ ವಕೀಲ ನರೇಂದ್ರ ಹೂಡಾ ಅವರು ಮಂಡಿಸಿದ ವಾದಗಳಿಗೆ ಮ್ಯಾಥ್ಯೂಸ್ ನೆಡುಂಪಾರ ಅಡ್ಡಿಪಡಿಸಿದರು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಹೂಡಾ ವಾದ ಮಂಡಿಸುತ್ತಿದ್ದಾಗ ನೆಡುಂಪಾರ ಅಡ್ಡಿಪಡಿಸಿ, ನಾನೇನೋ ಹೇಳಬೇಕು ಎಂದರು. ಚಂದ್ರಚೂಡ್ ಅವರಿಗೆ ಇದು ಇಷ್ಟವಾಗಲಿಲ್ಲ. ಮೊದಲು ಹೂಡಾ ಅವರು ವಾದ ಪೂರ್ಣಗೊಳಿಸಲಿ ನಂತರ ನೀವು ಮಾತನಾಡಿ ಎಂದು ಹೇಳಿದರು. ಈ ಕುರಿತು ನೆಡುಂಪಾರ ಅವರು ಮುಖ್ಯ ನ್ಯಾಯಮೂರ್ತಿಗಳನ್ನೇ ಪ್ರಶ್ನಿಸಿದರು. ಜತೆಗೆ ನಾನೇ ಇಲ್ಲಿ ಸೀನಿಯರ್ ಎಂದು ಹೇಳಿದರು.
ಇದರಿಂದ ಮತ್ತಷ್ಟು ಕೆರಳಿದ ಸಿಜೆಐ ಡಿವೈ ಚಂದ್ರಚೂಡ್ ಅವರು, ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ಹೀಗೆಲ್ಲಾ ನೀವು ಗ್ಯಾಲರಿಯಲ್ಲಿ ಮಾತನಾಡಬೇಡಿ. ಈ ನ್ಯಾಯಾಲಯದ ಉಸ್ತುವಾರಿ ನಾನು ಎಂದು ಹೇಳಿದ ಅವರು, ಭದ್ರತಾ ಸಿಬ್ಬಂದಿಗೆ ಕರೆ ಮಾಡಿ… ಅವರನ್ನು ಇಲ್ಲಿಂದ ತೆಗೆದುಹಾಕಿ ಎಂದು ಹೇಳಿದರು.
ಅದಕ್ಕೆ ನೆಡುಂಪಾರ ಅವರು, ನಾನೇ ಹೋಗುತ್ತಿದ್ದೇನೆ. ನನಗೆ (ಸಿಜೆಐ) ಹೇಳುವ ಅಗತ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಸಿಜೆಐ ಅವರು, ಇದನ್ನು ಹೇಳುವ ಅಗತ್ಯವಿಲ್ಲ. ನೀವು ಹೋಗಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗವನ್ನು ನೋಡುತ್ತಿದ್ದೇನೆ. ಈ ನ್ಯಾಯಾಲಯದಲ್ಲಿ ಕಾರ್ಯವಿಧಾನವನ್ನು ವಕೀಲರು ನಿರ್ಧರಿಸಲು ನಾನು ಬಿಡಲಾರೆ ಎಂದು ಹೇಳಿದರು.
ಸಿಜೆಐ ಅವರ ಉತ್ತರಕ್ಕೆ ಪ್ರತಿಕ್ರಿಯಿಸಿದ ನೆಡುಂಪಾರ ಅವರು, ನಾನು 1979 ರಿಂದ ನ್ಯಾಯಾಂಗವನ್ನು ನೋಡಿದ್ದೇನೆ ಎಂದರು. ಒಂದು ವೇಳೆ ನೆಡುಂಪಾರ ಅವರ ನಡವಳಿಕೆಯನ್ನು ಮುಂದುವರಿಸಿದರೆ, ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಅವರಿಗೆ ಎಚ್ಚರಿಕೆ ನೀಡಿದರು.