ಕಾಸರಗೋಡು: ಜನಮೈತ್ರಿ ಪೆÇೀಲೀಸ್ ಹಾಗೂ ಮೊಗ್ರಾಲ್‍ಪುತ್ತೂರು ಕುನ್ನಿಲ್ ಬ್ರದರ್ಸ್ ಸಹಯೋಗದೊಂದಿಗೆ ಪರವನಡ್ಕದ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ 'ಸ್ನೇಹಸಂಗಮ'ಕಾರ್ಯಕ್ರಮ ವೃದ್ಧ ಸದನದ ಹಿರಿಯ ಚೇತನಗಳಲ್ಲಿ ಸಂತೋಷಕ್ಕೆ ಕಾರಣವಾಯಿತು.
ವೃದ್ಧ ಸದನದ ಹಿರಿಯ ಚೇತನಗಳಾದ ಲಕ್ಷ್ಮಿಯಮ್ಮ ಅವರ ಸುಂದರ ಗೀತೆ ಮತ್ತು ಕುಟ್ಟಿಯಮ್ಮ ಅವರ ಕವನ ಗಮನ ಸೆಳೆಯಿತು. ತಮ್ಮ ಜೀವನದ ಒಳ್ಳೆ ದಿನಗಳಲ್ಲಿ ತಮ್ಮ ಪ್ರೀತಿಪಾತ್ರರಿಗಾಗಿ ಬೆವರು ಸುರಿಸಿರುವ ಅದೆಷ್ಟೋ ಮಂದಿ ಹಿರಿಯರು ತಮ್ಮ ಜೀವನದ ಸಂಧ್ಯಾಕಾಲಕ್ಕೆ ಬಂದಾಗ ಮನೆಯವರ ಮತ್ತು ಸಂಬಂಧಿಕರಿಂದ ನಿರ್ಲಕ್ಷ್ಯಕ್ಕೊಳಗಾಗಿ ಇಂತಹ ವೃದ್ಧ ಸದನ ಸೇರಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ತಮ್ಮ ಮಕ್ಕಳು ಅಥವಾ ಪ್ರೀತಿಪಾತ್ರರು ತಮ್ಮನ್ನು ವಾಪಾಸು ಕರೆದೊಯ್ಯಲು ಆಗಮಿಸುತ್ತಾರೆ ಎಂಬ ಆಶಾಭಾವನೆಯೊಂದಿಗೆ ಕಳೆಯುತ್ತಿರುವ ಇಲ್ಲಿನ ಹಿರಿಯ ಚೇತನಗಳಿಗೆ ಇಂತಹ ಸಂಘಟನೆಗಳು ಆಸರೆಯಾಗುತ್ತಿದೆ.
ವೃದ್ಧ ಸದನದ ಜೀವನದಲ್ಲಿ ಯಾವುದೇ ದೂರು ಅಥವಾ ಬೇಸರವಿಲ್ಲ, ಆತ್ಮೀಯರನ್ನು ನೋಡದೆ ಮನಸ್ಸಿನಲ್ಲಿ ಒಂದಷ್ಟು ದು:ಖ ಆವರಿಸಿರುವುದು ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂಬುದಾಗಿ ಹಿರಿಯ ಹಿರಿಯ ತಾಯಿಯೊಬ್ಬರು ತಿಳಿಸುತ್ತಾರೆ.
ಪ್ರೀತಿಯ ಸ್ಪರ್ಶದೊಂದಿಗೆ ಆಗಮಿಸಿದ ಜನಮೈತ್ರಿ ಪೊಲೀಸ್ ಹಾಗೂ ಕುನ್ನಿಲ್ ಬ್ರದರ್ಸ್ ಸಂಘಟನೆ ಸದಸ್ಯರು ಹಾಡು, ಕವನವಾಚನದೊಂದಿಗೆ ಹಿರಿಯ ಜೀವಗಳನ್ನು ರಂಜಿಸಿದರು. ಎಲ್ಲ ಹಿರಿಯ ಚೇತನಗಳಿಗೆ ರುಚಿಕರ ಭೋಜನ ವಿತರಿಸಲಾಯಿತು. ಅಧೀಕ್ಷಕ ನಿಶಾಂತ್, ಮಾಹಿನ್ ಕುನ್ನಿಲ್, ಶಾಹಿದ್ ಪುಳ್ಳಿ, ಜುಬೇರ್ ಕಾಯಿಕೋಟ್, ಜನಮೈತ್ರಿ ಪೆÇೀಲೀಸರಾದ ಸಂತೋಷ್, ಸೋನಿಯಾ ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.